ಬಾಗಲಕೋಟೆ, ದಾವಣಗೆರೆ ಶೇ.68.43ರಷ್ಟು ಮತದಾನ: ಟಗರಿನೊಂದಿಗೆ ಬಂದ ಕೈ ಅಭ್ಯರ್ಥಿ, ಹಣ ಹಂಚಿಕೆ ವಿಡಿಯೋ ವೈರಲ್
ಬೆಂಗಳೂರು (ಏ.10): ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಾಯಕರ ವಾಕ್ಸಮರಕ್ಕೆ ಕಾರಣವಾಗಿದ್ದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಫಲಿತಾಂಶ ತಿಳಿಯಲು ಹೆಚ್ಚೂ ಕಡಮೆ ಒಂದು ತಿಂಗಳು ಕಾಯಬೇಕಾಗುತ್ತದೆ. ಬಾಗಲಕೋಟೆ ಕ್ಷೇತ್ರದಲ್ಲಿ ಶೇ.68.74 ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ.68.43ರಷ್ಟು ಮಂದಿ ಮತ ಚಲಾಯಿಸಿದ್ದಾರೆ. ಬಾಗಲಕೋಟೆಯಲ್ಲಿ ಶೇ.68.69ರಷ್ಟು ಪುರುಷರು, ಶೇ.68.68ರಷ್ಟು ಮಹಿಳೆಯರು, ಶೇ.0.07ರಷ್ಟು ತೃತೀಯ ಲಿಂಗಿಗಳು ಮತ ಚಲಾಯಿಸಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಶೇ.68.55ರಷ್ಟು ಪುರುಷರು, ಶೇ.68.55ರಷ್ಟು ಮಹಿಳೆಯರು ಹಾಗೂ ಶೇ.0.08ರಷ್ಟು ತೃತೀಯ ಲಿಂಗಿಗಳು ಮತಚಲಾಯಿಸಿದ್ದಾರೆ. ಮೇ 4ರಂದು ಮತಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.