ಲೈಂಗಿಕ ಕಿರುಕುಳ ಪ್ರಕರಣ: ಖ್ಯಾತ ನಿರ್ದೇಶಕ ರಂಜಿತ್‌ಗೆ ಷರತ್ತುಬದ್ಧ ಜಾಮೀನು
ಕೊಚ್ಚಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮಲಯಾಳಂನ ಖ್ಯಾತ ಚಲನಚಿತ್ರ ನಿರ್ದೇಶಕ ರಂಜಿತ್ (Malayalam filmmaker Ranjith) ಅವರಿಗೆ ಎರ್ನಾಕುಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕೆಲವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ತನಿಖೆಯ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ನ್ಯಾಯಾಲಯವು ಈ ತೀರ್ಪು ನೀಡಿದ್ದು, ಪ್ರಕರಣವು ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ರಂಜಿತ್ ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನು ನೀಡಿದರೆ ಸಾಕ್ಷ್ಯನಾಶ ಮಾಡುವ ಸಾಧ್ಯತೆಯಿದೆ ಮತ್ತು ಅವರು ತನಿಖೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸುತ್ತಿಲ್ಲ ಎಂದು ಪ್ರಾಸಿಕ್ಯೂಷನ್ ವಾದಿಸಿತು. ಸಂತ್ರಸ್ತರ ರಕ್ಷಣೆ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿತು.
ತಾನು ತನಿಖೆಗೆ ಸಹಕರಿಸುತ್ತಿದ್ದು, ತಪ್ಪೊಪ್ಪಿಕೊಳ್ಳದಿರುವುದು ಅಸಹಕಾರವಲ್ಲ ಎಂದು ರಂಜಿತ್ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು. ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಭರವಸೆ ನೀಡಿದ ಅವರು, ನ್ಯಾಯಾಂಗ ವ್ಯವಸ್ಥೆಯ ಮೇಲೆ ತಮಗೆ ನಂಬಿಕೆ ಇರುವುದಾಗಿ ತಿಳಿಸಿದರು. ಚಿತ್ರವೊಂದರ ಚಿತ್ರೀಕರಣದ ವೇಳೆ ರಂಜಿತ್ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಯುವ ನಟಿಯೊಬ್ಬರು ದೂರು ನೀಡಿದ್ದರು. ಈ ದೂರು ಮೊದಲು ಚಿತ್ರತಂಡದ ಆಂತರಿಕ ದೂರು ಸಮಿತಿಯ (ICC) ಮುಂದೆ ಹೋಗಿತ್ತು. ಸಮಿತಿಯು ದೂರನ್ನು ಪರಿಶೀಲಿಸಿದ ನಂತರ ಹೆಚ್ಚಿನ ಕ್ರಮಕ್ಕಾಗಿ ಕೇರಳ ಪೊಲೀಸರಿಗೆ ವರ್ಗಾಯಿಸಿತ್ತು.
ತನಿಖೆಗೆ ಯಾವುದೇ ಅಡ್ಡಿಯಾಗದಂತೆ ನ್ಯಾಯಾಲಯವು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದೆ
ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು.ತನಿಖಾಧಿಕಾರಿಗಳು ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ತನಿಖೆಯ ಸಮಗ್ರತೆಯನ್ನು ಕಾಪಾಡಲು ಪೂರ್ಣ ಸಹಕಾರ ನೀಡಬೇಕೆನ್ನುವ ಷರತ್ತನ್ನು ಹಾಕಲಾಗಿದೆ.