ಪಾಕ್ ಎಡವಟ್ಟಿನಿಂದ ಲೆಬನಾನ್ ಗೊಂದಲ?
ಇಸ್ಲಾಮಾಬಾದ್/ಟೆಹ್ರಾನ್: ಮಧ್ಯಪ್ರಾಚ್ಯ ಸಂಘರ್ಷ ತೀವ್ರಗೊಳ್ಳುತ್ತಿರುವ ಹೊತ್ತಿನಲ್ಲೇ ಅಮೆರಿಕ-ಇರಾನ್ ನಡುವೆ ಬುಧವಾರ ಏರ್ಪಟ್ಟ 2 ವಾರಗಳ ತಾತ್ಕಾಲಿಕ ಕದನ ವಿರಾಮ ಕುರಿತ ಗೊಂದಲ ಗುರುವಾರವೂ ಮುಂದುವರೆದಿದೆ. ಈ ಗೊಂದಲಕ್ಕೆ ಕಾರಣ ಮಧ್ಯವರ್ತಿಯಾಗಿ ಕೆಲಸ ಮಾಡಿದ ಪಾಕಿಸ್ತಾನ ಎಂಬ ಆರೋಪ ಕೇಳಿಬರುತ್ತಿದೆ. ಡೀಲ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ‘ಕದನ ವಿರಾಮ ತಕ್ಷಣದಿಂದಲೇ ಜಾರಿಗೆ ಬರಲಿದೆ, ಲೆಬನಾನ್ ಸೇರಿ ಇತರೆ ದೇಶಗಳಿಗೂ ಇದು ಅನ್ವಯವಾಗಲಿದೆ’ ಎಂದು ಘೋಷಿಸಿದ್ದರು. ಇದನ್ನೇ ನಂಬಿದ್ದ ಇರಾನ್, ಲೆಬನಾನ್‌ಗೂ ಕದನವಿರಾಮ ಅನ್ವಯ ಎಂದಿತ್ತು.
ಆದರೆ ಇದರ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ‘ಕದನ ವಿರಾಮಕ್ಕೂ ಲೆಬನಾನ್ ಬಂಡುಕೋರರಿಗೂ ಯಾವುದೇ ಸಂಬಂಧ ಇಲ್ಲ’ ಎಂದಿದ್ದರು ಹಾಗೂ. ಲೆಬನಾನ್ ಮೇಲೆ ಬುಧವಾರ ಇಸ್ರೇಲ್ ಕಂಡು ಕೇಳರಿಯದ ಕ್ಷಿಪಣಿ ದಾಳಿ ನಡೆಸಿತ್ತು. ಇದು 250 ಜನರ ಸಾವಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ‘ಕದನವಿರಾಮ ಕೇವಲ ಇರಾನ್‌ಗೆ ಅನ್ವಯ. ಲೆಬನಾನ್‌ಗೆ ಇಲ್ಲ. ಬಹುಶಃ ಇರಾನ್ ಈ ವಿಚಾರದಲ್ಲಿ ಗೊಂದಲಕ್ಕೀಡಾಗಿದೆ’ ಎಂದಿದ್ದರು.
2 ಭಿನ್ನ ಸಂಧಾನ ಪ್ರತಿ ನೀಡಿದ ಪಾಕ್?:
‘ಈ ಗೊಂದಲಕ್ಕೆ ಮಾತುಕತೆ ವಹಿಸಿದ ಪಾಕಿಸ್ತಾನ ಕಾರಣ.
ಇರಾನ್-ಅಮೆರಿಕದ ಪ್ರತಿನಿಧಿಗಳ ನಡುವೆ ಮಧ್ಯವರ್ತಿಯಾಗಿ ಪಾಕಿಸ್ತಾನ ಕೆಲಸ ಮಾಡಿತ್ತು. ಪಾಕಿಸ್ತಾನವು ಕದನವಿರಾಮದ ಅಂಶಗಳಿರುವ ಒಂದೇ ರೀತಿಯ ಪ್ರತಿಯನ್ನು ಉಭಯ ದೇಶಗಳಿಗೆ ನೀಡಿಲ್ಲ. ಅಮೆರಿಕಕ್ಕೆ ಒಂದು ರೀತಿಯ ಪ್ರತಿ ಹಾಗೂ ಇರಾನ್‌ಗೆ ಇನ್ನೊಂದು ರೀತಿಯ ಪ್ರತಿಯನ್ನು ನೀಡಿದೆ. ಇದು ಗೊಂದಲಕ್ಕೆ ಕಾರಣ’ ಎಂದು ಇರಾನಿ ಮಾಧ್ಯಮಗಳು ವರದಿ ಮಾಡಿವೆ.
ಹೀಗಾಗಿ ಕದನ ವಿರಾಮದ ಹೊಣೆಗಾರಿಕೆ ನಿಭಾಯಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಇದರ ಪರಿಣಾಮ, ‘ಇಸ್ರೇಲ್ ಕದನವಿರಾಮ ಉಲ್ಲಂಘಿಸಿದೆ’ ಎಂದು ಆರೋಪಿಸಿರುವ ಇರಾನ್, ಹೋರ್ಮುಜ್ ಜಲಸಂಧಿ ಮುಚ್ಚಿದೆ ಹಾಗೂ ‘ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಿಲ್ಲಿಸದಿದ್ದರೆ ಕದನವಿರಾಮಕ್ಕೆ ಇತಿಶ್ರೀ ಹಾಕುವೆ’ ಎಂದು ಬೆದರಿಕೆ ಹಾಕಿದೆ.