ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಕೋರ್ಟ್ ಗ್ರೀನ್ ಸಿಗ್ನಲ್: ಷರತ್ತು ಅನ್ವಯ
ರಾಜ್ಯದ ಖಾಲಿ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಹೈಕೋರ್ಟ್ನ ಧಾರವಾಡ ವಿಭಾಗೀಯ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಹಿಂದಿನ ಪ್ರತಿಭಟನೆಗಳಲ್ಲಿ ಅಹಿತಕರ ಘಟನೆಗಳು ನಡೆದಿದ್ದರಿಂದ ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದರೆ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘದ ಮನವಿಯನ್ನು ಪುರಸ್ಕರಿಸಿದ ಕೋರ್ಟ್, 100 ಜನರಿಗೆ ಮಾತ್ರ ಹೋರಾಟಕ್ಕೆ ಅನುಮತಿ ನೀಡಿದೆ. ಕಾನೂನು ಸುವ್ಯವಸ್ಥೆ ಪಾಲನೆ ಸೇರಿದಂತೆ ಹಲವು ನಿರ್ಬಂಧಗಳನ್ನು ವಿಧಿಸಿದೆ.
ಇನ್ನು ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಈ ಹಿಂದೆ ಕೆಲ ಅಹಿತಕರ ಘಟನೆಗಳು ನಡೆದಿರುವ ಕಾರಣ ಪ್ರತಿಭಟನೆಗೆ ನಾವು ಅನುಮತಿ ನೀಡಿರಲಿಲ್ಲ. ಆದರೆ ಸಂಘಟನೆಯವರು ಕೋರ್ಟ್ ಮೊರೆ ಹೋಗಿದ್ದು, ಈ ಸಂಬಂಧ ನಮಗೆ ಉತ್ತರಿಸಲು ಹೈಕೋರ್ಟ್ ಎರಡು ದಿನಗಳ ಕಾಲಾವಕಾಶ ನೀಡಿತ್ತು. ಅದರಂತೆ ನಾವು ವಿವರವಾದ ಮಾಹಿತಿಯನ್ನು ನೀಡಿದ್ದೆವು. ಅದರಂತೆ ಕೆಲ ಷರತ್ತುಗಳ ಜೊತೆ ಸಂಘಟನೆಗೆ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶವನ್ನು ಕೋರ್ಟ್ ನೀಡಿದೆ ಹಿಂದಿನ 2 ಪ್ರತಿಭಟನೆಗಳಲ್ಲಿ ಅಹಿತಕರ ಘಟನೆಗಳು ನಡೆದಿದ್ದವು. ಕಳೆದ ಬಾರಿ ನಡೆದ ಪ್ರತಿಭಟನೆಯಲ್ಲಿ 17 ಸಿಬ್ಬಂದಿಗೆ ಪೆಟ್ಟುಗಳಾಗಿದ್ದು, ಆ ಕುರಿತು 6 ಪ್ರಕರಣಗಲು ದಾಖಲಾಗಿದ್ದವು ಎಂದು ತಿಳಿಸಿದ್ದಾರೆ.