Women Reservation Bill: ಸ್ವಾರ್ಥ, ಅಪಸ್ವರವಿಲ್ಲದೆ ಮಹಿಳಾ ಮೀಸಲಾತಿ ಜಾರಿಯಾಗಲಿ
ತಂಜಾವೂರಿನ ಬೃಹದೀಶ್ವರ ದೇವಾಲಯ ಪ್ರವೇಶಿಸುತ್ತಿದ್ದಂತೆಯೇ ಎಡಕ್ಕೆ ಶ್ರೀ ವಾರಾಹಿ ಕಂಗೊಳಿಸುತ್ತಾಳೆ. ಆ ಅದ್ಭುತ ದೇವಾಲಯವನ್ನು ನಿರ್ಮಿಸಿದ ಸಾಮ್ರಾಟ ರಾಜ ರಾಜ ಚೋಳ, ವಾರಾಹಿಗೆ ಕೈಮುಗಿದೇ ಯುದ್ಧಕ್ಕೆ ತೆರಳುತಿದ್ದ ಎಂಬುದು ಇತಿಹಾಸ. ತಿಳಿದವರಿಗೆ ಗೊತ್ತು ವಾರಾಹಿ, ತಂತ್ರ ಮಾರ್ಗದಲ್ಲಿ ಪೂಜಿಸಲ್ಪಡುವ ಶಕ್ತಿ ದೇವತೆ ಎಂದು. ಛತ್ರಪತಿ ಶಿವಾಜಿ ಮಹಾರಾಜರು ಕೂಡ ಮೊರೆ ಹೋಗುತ್ತಿದ್ದುದು ಶಕ್ತಿ ಪೀಠಗಳಲ್ಲಿ ಒಂದಾದ ತುಳಜಾಪುರದ ಭವಾನಿಯನ್ನು. ನಮ್ಮ ಕದಂಬರು ಬನವಾಸಿಯ ಭುವನೇಶ್ವರಿಯನ್ನು ನಂಬಿದ್ದರು. ಯದು ವಂಶದ ಒಡೆಯರಿಗೆ ಚಾಮುಂಡಿಯೇ ಸರ್ವಸ್ವ. ಅಂದಿನ ಸಾಮ್ರಾಟರು, ಯೋಧರಿಂದ ಇಂದಿನ ರಾಜಕಾರಣಿಗಳವರೆಗೆ ಎಲ್ಲರೂ ‘ಶಾಕ್ತೇಯರು’, ಅರ್ಥಾತ್ ಶಕ್ತಿಯ ಆರಾಧಕರು ಎಂಬುದು ರಾಜಕಾರಣಿಯಾಗಿ ನಾನು ಕಂಡುಕೊಂಡ ಸತ್ಯ.
ಅಸ್ಸಾಂನ ಕಾಮಾಕ್ಯ, ಬೆಂಗಳೂರಿನ ರಾಜರಾಜೇಶ್ವರಿ, ಮಧುರೈ ಮೀನಾಕ್ಷಿ/ರಾಜ ಮಾತಂಗಿ, ದೆಹಲಿಯ ಛತ್ತರ್‌ಪುರದ ಕಾತ್ಯಾಯಿನಿಯಂತಹ ದೇವಾಲಯಗಳಿಗೆ ಅನೇಕರು ಮೊರೆ ಹೋಗುವುದು ಸಾರ್ವಜನಿಕ ಜ್ಞಾನ. ನನಗೆ ಅಚ್ಚರಿಯೆನಿಸಿದ್ದೇನೆಂದರೆ, ಹೀಗೆ ಶಕ್ತಿಯನ್ನು ಆರಾಧಿಸುವ ರಾಜಕಾರಣಿಗಳು, ಮಹಿಳೆಯರ ರಾಜಕೀಯ ಭೂಮಿಕೆಗೆ ಇಷ್ಟು ದಶಕಗಳ ಕಾಲ ಅಡ್ಡಿಪಡಿಸಿದ್ದೇಕೆ ಎಂಬುದು? ಸಂವಿಧಾನ ಶಿಲ್ಪಿ ಅಂಬೇಡ್ಕರರಿಂದಾಗಿ 1952ರ ಸ್ವತಂತ್ರ ಭಾರತದ ಮೊದಲ ಚುನಾವಣೆಯಲ್ಲಿ ಮಹಿಳೆಯರೂ ಪುರುಷರಂತೆಯೇ ಮತದಾನ ಮಾಡಿದ್ದರು. ಅಮೆರಿಕದಲ್ಲಿ ಸ್ವಾತಂತ್ರ್ಯ ಬಂದು ಮಹಿಳೆಯರು ಮತದಾನ ಮಾಡಲು 200 ವರ್ಷ ಕಾಯಬೇಕಿತ್ತು. ನಮ್ಮನ್ನಾಳಿದ ಬ್ರಿಟಿಷರೇ ಮತದಾನದ ಹಕ್ಕು ನೀಡಲು ಮಹಿಳೆಯರನ್ನು ದಶಕಗಳ ಕಾಲ ಕಾಯಿಸಿದರು.
ಸಂವಿಧಾನದ 73ನೇ ತಿದ್ದುಪಡಿ ಮೂಲಕ ಪಿ.ವಿ.ನರಸಿಂಹ ರಾಯರು ಪ್ರಧಾನಿಯಾಗಿದ್ದ ಕಾಲದಲ್ಲಿ 33% ಮಹಿಳಾ ಮೀಸಲಾತಿಯನ್ನು ಪಂಚಾಯತಿಗಳಲ್ಲಿ/ಸ್ಥಳೀಯ ಸಂಸ್ಥೆಗಳಾದ ನಗರ-ಪುರ ಸಭೆಗಳಲ್ಲಿ 1992ರಲ್ಲಿ ಜಾರಿಗೊಳಿಸಲಾಯಿತು. ಸಾಮಾನ್ಯ ಮಹಿಳೆಯರ ಪಾಲಿಗೆ ಭಾಗ್ಯದ ಬಾಗಿಲೇ ತೆರೆದಂತಾಯಿತು. ಅಲ್ಲಿಯವರೆಗೆ, ಹೆಂಡತಿಯನ್ನು ಕಸಕ್ಕಿಂತ ಕೀಳಾಗಿ ನೋಡುತ್ತಿದ್ದ ಗಂಡ, ಓದು- ಬರಹ ಗೊತ್ತಿಲ್ಲದ ಗ್ರಾಪಂ ಅಧ್ಯಕ್ಷೆ-ಹೆಂಡತಿಯ ಬಳಿ ಸಹಿ ಪಡೆದೇ ಪಾಸ್ಪೋರ್ಟ್ ಮಾಡಿಸಿಕೊಳ್ಳುವ ವಿನೋದ ಪ್ರಸಂಗದಂಥವು ಹಲವು ನಡೆದು ಹೋದವು. ಮೊನ್ನೆಯ ಭಾಷಣದಲ್ಲಿ ಪ್ರಧಾನಿಗಳು ಉಲ್ಲೇಖಿಸಿದ ಗುಜರಾತಿನ ಪ್ರಸಂಗ ಅದರಲ್ಲಿ ಅತಿ ವಿನೋದದ್ದು. ಒಂದು ಗ್ರಾಪಂನಲ್ಲಿನ 13 ಸ್ಥಾನಗಳನ್ನೂ ಪುರುಷರು ಸ್ಪರ್ಧೆಯೇ ಮಾಡದೆ ಮಹಿಳೆಯರಿಗೆ ಬಿಟ್ಟುಕೊಟ್ಟಿದ್ದಾರೆ.
ಆ ಎಲ್ಲ ಮಹಿಳೆಯರು ಆಗ ಮುಖ್ಯಮಂತ್ರಿಯಾಗಿದ್ದ ಮೋದಿ ಅವರನ್ನು ಕಾಣಲು ಬಂದಾಗ, ಎಲ್ಲರಂತೆ ಇವರೂ ಅನುದಾನಕ್ಕೆ ಬಂದಿರುವುದೆಂದುಕೊಂಡು ಏನು ಬೇಕು ಎಂದರಂತೆ ಮೋದಿ. ನಮಗೇನೂ ಬೇಡ. ನಿಮ್ಮನ್ನು ಕಾಣುವ ಆಸೆಯಷ್ಟೆ ಎಂದು ಉತ್ತರ ಕೊಟ್ಟರಂತೆ ಸದಸ್ಯೆಯರು. ಶಾಲೆ, ರಸ್ತೆ, ಕಾರ್ಖಾನೆಯಂಥ ಯಾವುದನ್ನೋ ತರುತ್ತೇವೆ ಎನ್ನುತ್ತಾರೆ ಅಂದುಕೊಂಡು, ಹೇಗೆ ಹಳ್ಳಿಯನ್ನು ಸುಧಾರಿಸುತ್ತೀರಾ? ನಿಮ್ಮ ಯೋಜನೆ ಏನು ಎಂದಾಗ, ನಮ್ಮ ಹಳ್ಳಿಯಲ್ಲಿ ಒಬ್ಬರೂ ಬಡವರಾಗಿ ಉಳಿಯಬಾರದು. ಅದೇ ನಮ್ಮ ಧ್ಯೇಯ ಎಂದರಂತೆ. ಭುವನದ ಯಾವ ಆರ್ಥಿಕ ತಜ್ಞನೂ ನೀಡಲಾರದ ಸರಳ ಉತ್ತರವನ್ನು ಹೈಸ್ಕೂಲ್ ದಾಟದ ತಾಯಿಯೊಬ್ಬರು ಕೊಟ್ಟರು. ಆಕೆಯ ಉತ್ತರ ಮಹಿಳೆಯರ ಸಾಮರ್ಥ್ಯದ ಮತ್ತೊಂದು ಆಯಾಮ ತೆರೆದಿಟ್ಟಿತು ಎಂದು ಪ್ರಧಾನಿಗಳು ಸ್ಮರಿಸಿಕೊಂಡರು.