Select Location
All Locations
State
Region
City / District
ಬಸವ ಸಮಿತಿ, ಬಿ.ಡಿ.ಜತ್ತಿ ವಚನ ಅಧ್ಯಯನ ಕೇಂದ್ರದಿಂದ ಅನುದಿನ–ಅನುಕ್ಷಣ ವಚನ ಪ್ರಸಾರ

ಬಸವ ಸಮಿತಿ, ಬಿ.ಡಿ.ಜತ್ತಿ ವಚನ ಅಧ್ಯಯನ ಕೇಂದ್ರದಿಂದ ಅನುದಿನ–ಅನುಕ್ಷಣ ವಚನ ಪ್ರಸಾರ

ಕಲಬುರಗಿ: ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,‌ ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಇದೇ ಅಂತರಂಗಶುದ್ಧಿ, ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ.. ಇವು ಜಗಜ್ಯೋತಿ ಬಸವಣ್ಣವರ ವಚನವೊಂದರ ಸಾಲುಗಳು. ಈ ಸಪ್ತ ಸೂತ್ರಗಳು ಮನುಜರೆಲ್ಲರ ಬದುಕಿಗೂ ದಾರಿದೀವಿಗೆಯೇ ಸರಿ. ಇವುಗಳನ್ನು ಅಳವಡಿಸಿಕೊಂಡರೆ ಬದುಕು ಬೆಳಕು ಕಾಣುತ್ತದೆ. ಈಗ್ಗೆ 900 ವರ್ಷಗಳ ಹಿಂದೆ 12ನೇ ಶತಮಾನದಲ್ಲಿ ಬಸವಣ್ಣ ಹಾಗೂ ಬಸವಾದಿ ಪ್ರಮಥರು ಸಮಾನತೆ, ಅರಿವು, ದಾಸೋಹ, ಕಾಯಕ ಸೇರಿದಂತೆ ಹತ್ತಾರು ಕ್ಷೇತ್ರಗಳ ಬಗೆಗೆ ಸಾವಿರ–ಸಾವಿರ ಸಂಖ್ಯೆಯಲ್ಲಿ ಅನುಭವ ಜನ್ಯವಾದ ವಚನಗಳನ್ನು ನೀಡಿದ್ದಾರೆ. 

‘ಶ್ರೇಷ್ಠ ಬದುಕಿನ ವಿಧಾನ’ವನ್ನು ಸರಳಗನ್ನಡದಲ್ಲಿ ಶ್ರೀಸಾಮಾನ್ಯರಿಗೆ ತಲುಪಿಸಿದ್ದಾರೆ. ‘ಈ ಕ್ರಾಂತಿಕಾರಿ ಚಿಂತನೆ’ಗಳು ಒಳಗೊಂಡ ವಚನಗಳು ಮೊದಲಿಗೆ ತಾಳೆಗರಿಯ ಕಟ್ಟುಗಳಲ್ಲಿ ದಕ್ಕಿದವು. ಬಳಿಕ ಅವು ಪುಸಕ್ತಗಳ ರೂಪದಲ್ಲಿ ಪ್ರಸಾರಗೊಂಡವು. ಕನ್ನಡದಿಂದ ಹಲವು ಭಾರತೀಯ ಭಾಷೆಗಳಿಗೂ ದಕ್ಕಿವೆ. ಈ ವಚನ ಸಾಹಿತ್ಯವನ್ನು ಸದ್ದಿಲ್ಲದೇ ಪಸರಿಸುವ ಕಾರ್ಯದಲ್ಲಿ ಕಲಬುರಗಿ ಬಸವ ಸಮಿತಿ ಮತ್ತು ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ತೊಡಗಿವೆ. ವಿಶ್ವನಾಥ ರೆಡ್ಡಿ ಮುದ್ನಾಳ ಅವರ ನೇತೃತ್ವದಲ್ಲಿ 2002ರ ಅಕ್ಟೋಬರ್‌ನಲ್ಲಿ ಕಲಬುರಗಿ ಬಸವ ಸಮಿತಿಯು ಅಧಿಕೃತವಾಗಿ ಶುರುವಾಗಿತ್ತು. 

ಇದೀಗ ಅದನ್ನು ವಿಲಾಸವತಿ ಖೂಬಾ ಅವರನ್ನು ಮುನ್ನಡೆಸುತ್ತಿದ್ದಾರೆ. ವರ್ಷವಿಡೀ ವಚನ ಸಾಹಿತ್ಯ ಪೊರೆಯುವ, ಪಸರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಕಲಬುರಗಿಯ ಜಯನಗರದಲ್ಲಿರುವ ಅನುಭವ ಮಂಟಪವನ್ನು ‘ವಚನಗಳ ಮಂಥನ’ದ ತಾಣವಾಗಿಸಿದ್ದಾರೆ. ಕಲಬುರಗಿ ಬಸವ ಸಮಿತಿಯು 2003ರ ಜನವರಿ 5ರಿಂದ ಪ್ರತಿವಾರವೂ ದತ್ತಿ ಉಪನ್ಯಾಸಗಳನ್ನು ನಡೆಸುತ್ತಿದೆ. ಅದಕ್ಕೆ ಅರಿವಿನ ಮನೆ ಕಾರ್ಯಕ್ರಮ ಎಂದು ಹೆಸರಿಟ್ಟಿದೆ. ಈ ಈತನಕ 896 ಅರಿವಿನ ಮನೆ ಕಾರ್ಯಕ್ರಮಗಳು ನಡೆದಿವೆ. ಈ ಮೂಲಕ ಬಸವಾದಿ ಪ್ರಮಥರ ವಚನಗಳ ಸಾರ ಬಿತ್ತರಿಸುವ ಕೆಲಸ ಮಾಡುತ್ತಿದೆ.


Prajavani 1 month ago
Home Flash News