ನಮ್ಮೂರಿನ ಹುಡುಗ, ಆರ್‌ಸಿಬಿಗೆ ವಿಲನ್? ರಜತ್ ಪಡೆಗೆ ಕಾಡಲಿದೆಯೇ ‘ಕನ್ನಡಿಗ’ನ ಭಯ?
ಹಸಿದ ಹೆಬ್ಬುಲಿಯಂತಿದ್ದಾರೆ ರಾಹುಲ್!
ಇತ್ತೀಚಿನ ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ ಪ್ರದರ್ಶನ ಏರಿಳಿತಗಳಿಂದ ಕೂಡಿದೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಸಿಂಗಲ್ ಡಿಜಿಟ್ ರನ್‌ಗೆ ಔಟಾಗಿ ನಿರಾಸೆ ಮೂಡಿಸಿದ್ದ ರಾಹುಲ್, ಗುಜರಾತ್ ಟೈಟನ್ಸ್ ವಿರುದ್ಧ 92 ರನ್ ಸಿಡಿಸಿ ಅಬ್ಬರಿಸಿದ್ದರು. ಆದರೆ ಚೆನ್ನೈ ವಿರುದ್ಧ ಮತ್ತೆ 18 ರನ್‌ಗಳಿಗೆ ಸುಸ್ತಾಗಿದ್ದರು. ಹೀಗಾಗಿ, ಇಂದು ತಮ್ಮ ಹಳೇ ಫಾರ್ಮ್ ಕಂಡುಕೊಳ್ಳಲು ರಾಹುಲ್ ಹಸಿದ ಹೆಬ್ಬುಲಿಯಂತೆ ಕಾಯುತ್ತಿದ್ದಾರೆ.
ಇದನ್ನೂ ಓದಿ: ಕಾಕತಾಳೀಯಗಳ ಸಂಗಮದೊಂದಿಗೆ KL ರಾಹುಲ್ಗೆ ಹುಟ್ಟುಹಬ್ಬ ಸಂಭ್ರಮ.. ಚಿನ್ನಸ್ವಾಮಿಯಲ್ಲಿ ಇವತ್ತು ಮನೆಮಗನ ದರ್ಬಾರ್ ಪಕ್ಕಾ!
ರಾಹುಲ್ ಪಾಲಿಗೆ ತವರು ಮನೆ
ರಾಹುಲ್ ಹುಟ್ಟಿ, ಬೆಳೆದು, ಕ್ರಿಕೆಟ್ ಕಲಿತಿದ್ದೇ ಬೆಂಗಳೂರಿನಲ್ಲಿ.
ಚಿನ್ನಸ್ವಾಮಿ ಮೈದಾನದ ಪಿಚ್ ಗುಣಲಕ್ಷಣಗಳು ಅವರಿಗೆ ಕರತಲಾಮಲಕ. ಇಲ್ಲಿನ ಕಂಡೀಷನ್ಸ್ ಅವರಿಗೆ ಕ್ಲಿಯರ್ ಆಗಿ ಗೊತ್ತಿರುವುದರಿಂದ ಯಾವುದೇ ಒತ್ತಡವಿಲ್ಲದೆ ಬ್ಯಾಟ್ ಬೀಸಬಲ್ಲರು. ಈಗಾಗಲೇ ಈ ಮೈದಾನದಲ್ಲಿ 42.6ರ ಸರಾಸರಿಯಲ್ಲಿ 469 ರನ್ ಬಾರಿಸಿರುವ ರಾಹುಲ್, ಮೂರು ಅರ್ಧಶತಕಗಳನ್ನೂ ಸಿಡಿಸಿದ್ದಾರೆ. ಹೀಗಾಗಿ ಈ ಪಂದ್ಯ ರಾಹುಲ್ ಪಾಲಿಗೆ ಕೇವಲ ಪಂದ್ಯವಲ್ಲ, ಇದು ಅವರ ಪ್ರತಿಷ್ಠೆಯ ಪ್ರಶ್ನೆಯೂ ಹೌದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೆ.ಎಲ್. ರಾಹುಲ್ ದಾಖಲೆ ಅತ್ಯಂತ ಭಯಾನಕವಾಗಿದೆ. ಆರ್‌ಸಿಬಿ ಬೌಲರ್‌ಗಳನ್ನು ದಂಡಿಸುವಲ್ಲಿ ರಾಹುಲ್ ಯಾವಾಗಲೂ ಮುಂದೆ. ಈ ಅಂಕಿಅಂಶಗಳೇ ಹೇಳುವಂತೆ, ಬೆಂಗಳೂರು ತಂಡದ ವಿರುದ್ಧ ರಾಹುಲ್ ಪ್ರತಿ ಬಾರಿಯೂ ಅಬ್ಬರಿಸಿದ್ದಾರೆ. ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿ ಕೆ.ಎಲ್.
ರಾಹುಲ್ ಅವರನ್ನು ಖರೀದಿ ಮಾಡದಿರುವುದು ಅಭಿಮಾನಿಗಳಲ್ಲಿ ಇಂದಿಗೂ ಬೇಸರವಿದೆ. ಆದರೆ ಇಂದು ಅವರು ಎದುರಾಳಿ ತಂಡದ ಪರವಾಗಿ ಕಣಕ್ಕಿಳಿಯುತ್ತಿದ್ದಾರೆ. ನಮ್ಮ ಮೈದಾನದಲ್ಲೇ ನಮ್ಮ ತಂಡದ ವಿರುದ್ಧ ಅವರು 'ಸ್ವೀಟ್ ವಿಲನ್' ಆಗಿ ಕಾಡಿದರೂ ಅಚ್ಚರಿ ಪಡಬೇಕಿಲ್ಲ.
ಅಭಿಮಾನಿಗಳ ಆಶಯವೇನು?
ಒಟ್ಟಿನಲ್ಲಿ, ರಾಹುಲ್ ಇಂದು ಎದುರಾಳಿ ತಂಡದಲ್ಲಿದ್ದಾರೆ. ಕನ್ನಡಿಗರ ಮನಸ್ಥಿತಿ ಈಗ ಹೇಗಿದೆಯೆಂದರೆ- ರಾಹುಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಲಿ, ಸಿಕ್ಸರ್-ಬೌಂಡರಿಗಳ ಸುರಿಮಳೆಗೈಯಲಿ, ವಿಕೆಟ್ ಹಿಂದೆ ಮಿಂಚಲಿ... ಆದರೆ ಅಂತಿಮವಾಗಿ ಗೆಲುವು ಮಾತ್ರ ನಮ್ಮ ಆರ್‌ಸಿಬಿಗೆ ಸಿಗಲಿ! ನಮ್ಮೂರಿನ ಹುಡುಗನ ಆಟ ಮತ್ತು ನಮ್ಮ ತಂಡದ ಗೆಲುವಿನ ನಡುವಿನ ಈ ರೋಚಕ ಹೋರಾಟವನ್ನು ನೋಡಲು ಚಿನ್ನಸ್ವಾಮಿ ಕ್ರೀಡಾಂಗಣ ಈಗ ಸಂಪೂರ್ಣ ಸಜ್ಜಾಗಿದೆ.