Select Location
All Locations
State
Region
City / District
ಅಂಬೇಡ್ಕರ್ ಪ್ರತಿಮೆ ಪೂಜೆ ಮಾಡುತ್ತಲೇ ಅವರ ವಿಚಾರಗಳನ್ನ ಕೊಲ್ಲುವವರಿದ್ದಾರೆ ಎಚ್ಚರ -ಕೆ.ವಿ.ಪ್ರಭಾಕರ್

ಅಂಬೇಡ್ಕರ್ ಪ್ರತಿಮೆ ಪೂಜೆ ಮಾಡುತ್ತಲೇ ಅವರ ವಿಚಾರಗಳನ್ನ ಕೊಲ್ಲುವವರಿದ್ದಾರೆ ಎಚ್ಚರ -ಕೆ.ವಿ.ಪ್ರಭಾಕರ್

ಕೋಲಾರ: ಅಂಬೇಡ್ಕರ್ ಅವರ ಸಂವಿಧಾನ ಮತ್ತು ವಿಚಾರಗಳನ್ನು ನಿರಂತರವಾಗಿ ವಿರೋಧಿಸಿಕೊಂಡು ಬರುತ್ತಿರುವವರೇ ಇವತ್ತು ಅಂಬೇಡ್ಕರ್ ಜಯಂತಿ ಆಚರಿಸುತ್ತಿರುವ ಸೋಗಲಾಡಿತನ ಹಾಸ್ಯಾಸ್ಪದ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. "ಜೈ ಭೀಮ್-ಜೈ ಭಾರತ್" ಸಂಘಟನೆ ಆಯೋಜಿಸಿದ್ದ 135ನೇ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಅವರ ವಿಚಾರದಲ್ಲಿ ಎರಡು ರೀತಿಯ ರಾಜಕೀಯ ಮತ್ತು ಸಾಂಸ್ಕೃತಿಕ ದಾಳಿ ದೇಶದಲ್ಲಿ ನಡೆಯುತ್ತಿದೆ. ಮೊದಲನೆಯದ್ದು, "ಅಂಬೇಡ್ಕರ್ ಪ್ರತಿಮೆಗೆ ಪೂಜೆ ಮಾಡುತ್ತಲೇ ಅವರ ವಿಚಾರಗಳನ್ನು ಕೊಲ್ಲುವ ದಾಳಿ", ಎರಡನೆಯದ್ದು ಅಂಬೇಡ್ಕರ್ ಅವರ ಪ್ರಜ್ವಲಿಸುವ ವಿಚಾರಗಳನ್ನು ಸಹಿಸದೆ ಅವರ ಪ್ರತಿಮೆಗಳ ಮೇಲೆ ನಡೆಯುತ್ತಿರುವ ದೈಹಿಕ ದಾಳಿ ಎಂದು ವಿವರಿಸಿದರು.

ಈ ಎರಡೂ ರೀತಿಯ ದಾಳಿಗಳಿಂದ ಅಂಬೇಡ್ಕರ್ ಚಿಂತನೆಗಳು, ವಿಚಾರಗಳು ಮತ್ತೆ ಮತ್ತೆ ಗಟ್ಟಿಯಾಗಿ ಬೆಳೆಯುತ್ತಿವೆ ಮತ್ತು ಇವತ್ತಿನ ತಲೆಮಾರಿನ ಪ್ರತೀ ಶೋಷಿತನ‌ ಎದೆಯೊಳಗೆ ಅಂಬೇಡ್ಕರ್ ಅವರ ಪ್ರತಿಷ್ಠಾಪನೆ ನಡೆಯುತ್ತಿದೆ. ಏಕೆಂದರೆ ಅಂಬೇಡ್ಕರ್ ಅವರದ್ದು, ಅವಮಾನಗಳಿಂದಲೇ ಹೆಪ್ಪುಗಟ್ಟಿದ ಶಕ್ತಿಶಾಲಿ ವ್ಯಕ್ತಿತ್ವ. ತಮ್ಮ ಕಾಲ ಬುಡದಲ್ಲಿ ಅನುಭವಿಸಿದ ಅವಮಾನಗಳಿಗೆಲ್ಲಾ ಎದೆಗೊಟ್ಟು ಹೋರಾಡಿ ವಿಶ್ವ ಮಾನ್ಯತೆ ಗಳಿಸಿದ ಮಹಾನ್ ಚೇತನ ಅನ್ನಿಸಿಕೊಂಡರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಂಬೇಡ್ಕರ್ ಅಂದರೆ ಕೇವಲ ವ್ಯಕ್ತಿಯಲ್ಲ, ಕೇವಲ ಪ್ರತಿಮೆ ಅಲ್ಲ. ಅಂಬೇಡ್ಕರ್ ಅಂದರೆ ಒಂದು ಮಾದರಿ ಮತ್ತು ಒಂದು ಮಾರ್ಗ. ದೈಹಿಕ ಮತ್ತು ಮಾನಸಿಕ ಗುಲಾಮಗಿರಿಯಿಂದ ವಿಮೋಚನೆ ಹೊಂದುವ ಮಾದರಿ ಮತ್ತು ಈ ವಿಮೋಚನೆಗೆ ರೂಪುಗೊಂಡ ಮಾನವೀಯತೆಯ ರಾಷ್ಟ್ರೀಯ ಹೆದ್ದಾರಿ. 

ಅಂಬೇಡ್ಕರ್ ಎಂದರೆ ಅವಮಾನಗಳಿಂದ ಅರಿವಿನ ಕಡೆಗೆ, ಅರಿವಿನಿಂದ ಜ್ಞಾನದೆ ಕಡೆಗೆ, ಜ್ಞಾನದಿಂದ ವಿಮೋಚನೆಯೆಡೆಗೆ ಕರೆದೊಯ್ಯುವ ದಾರಿಯಾಗಿದ್ದಾರೆ. ಹೆದ್ದಾರಿಯಾಗಿದ್ದಾರೆ ಎಂದು ವಿವರಿಸಿದ್ದಾರೆ. ಎಲ್ಲಾ ಜಾತಿಯ, ಎಲ್ಲಾ ಧರ್ಮದ ಮಹಿಳೆಯರ ಘನತೆ ಮತ್ತು ಸಮಾನತೆಗಾಗಿ ಅಂಬೇಡ್ಕರ್ ಅವತ್ತು ಮಾಡಿಟ್ಟ ಕಾನೂನಿನ ಆಸ್ತಿ ಇವತ್ತಿಗೂ ಭಾರತೀಯ ಮಹಿಳೆಯರ ಪಾಲಿಗೆ ದೊಡ್ಡ ಠೇವಣೆಯಾಗಿದೆ. ಹಿಂದೂ ಕೋಡ್ ಬಿಲ್ ರಚಿಸಿದ್ದು ಮತ್ತು ಇದರ ಜಾರಿಗೆ ಹೋರಾಡಿದ್ದು ಮಹಿಳೆಯರ ಹಕ್ಕುಗಳಿಗಾಗಿ ಅಂಬೇಡ್ಕರ್ ನೀಡಿದ ಅತಿದೊಡ್ಡ ಕೊಡುಗೆ. ಈ ಮಸೂದೆಯ ಮೂಲಕ ಮಹಿಳೆಯರಿಗೆ ತಂದೆ ಮತ್ತು ಪತಿಯ ಆಸ್ತಿಯಲ್ಲಿ ಸಮಾನ ಪಾಲು ಒದಗಿ ಬಂತು. ಶೋಷಣೆಯಿಂದ ಸ್ವತಂತ್ರವಾಗಿ ಹೊರಗೆ ಬರಲು ಮಹಿಳೆಯರಿಗೂ ವಿಚ್ಛೇದನ ಪಡೆಯುವ ಹಕ್ಕು‌ ದೊರೆಯಿತು.


News First 1 hour ago
Home Flash News