ಮೀಸಲಾತಿ ಹೆಚ್ಚಳಕ್ಕೆ 9ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರ ಬಳಿ ನಿಯೋಗ: ವಿ.ಎಸ್.ಉಗ್ರಪ್ಪ
ಬಳ್ಳಾರಿ (ಏ.20): ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ಹೆಚ್ಚಿಸುವ ಸಂಬಂಧ ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಮಂತ್ರಿ ಭೇಟಿ ಮಾಡಿ ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸಲು ಪ್ರಯತ್ನಿಸಬೇಕು. ಜೂನ್ ವೇಳೆಗೆ ರಾಜ್ಯ ಸರ್ಕಾರ ನಿಯೋಗ ತೆರಳದಿದ್ದರೆ ರಾಜ್ಯವ್ಯಾಪಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಎಚ್ಚರಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳ ಮೀಸಲಾತಿ ಹೆಚ್ಚಳ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಮುಖ್ಯಮಂತ್ರಿ ಸಹ ಸರ್ವಪಕ್ಷಗಳ ನಿಯೋಗವನ್ನು ಕೇಂದ್ರದ ಬಳಿ ತೆಗೆದುಕೊಂಡು ಹೋಗುವ ವಿಚಾರದಲ್ಲಿ ವಿಳಂಬ ಮಾಡುತ್ತಿರುವುದು ನಿಜ ಎಂದರು. ಎಸ್ ಆರ್ ನೋ ಎಂದು ಹೇಳಲಿ: ಮುಖ್ಯಮಂತ್ರಿ ನಿಯೋಗ ಕರೆದುಕೊಂಡು ಹೋಗುವ ವಿಚಾರದಲ್ಲಿ ಎಸ್ ಅಥವಾ ನೋ ಎಂಬುದನ್ನಷ್ಟೇ ಹೇಳಲಿ.
ವಿನಾಕಾರಣ ಮುಂದೂಡುವುದನ್ನು ಸಹಿಸುವುದಿಲ್ಲ. ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಂಡರೆ ಹೋರಾಟದ ಮೂಲಕ ಉತ್ತರ ನೀಡುತ್ತೇವೆ ಎಂದು ವಿ.ಎಸ್.ಉಗ್ರಪ್ಪ ತಿಳಿಸಿದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಎಸ್ಟಿ ಸಮುದಾಯಕ್ಕೆ ಶೇ.3ರಿಂದ 7 ಮತ್ತು ಎಸ್ಸಿ ಸಮುದಾಯಕ್ಕೆ ಶೇ.15ರಿಂದ 17ಕ್ಕೆ ಮೀಸಲಾತಿ ಹೆಚ್ಚಳ ಮಾಡಿ ಒಟ್ಟಾರೆಯಾಗಿ ಶೇ.50 ಇದ್ದ ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಳ ಮಾಡಿದರು.