ಶ್ರೀಲಂಕಾ: ಫಲಾನುಭವಿಗಳ ಭೇಟಿ ಮಾಡಿದ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್
ಕೊಲಂಬೊ: ಭಾರತೀಯ ವಸತಿ ಯೋಜನೆಯಡಿ ನಿರ್ಮಾಣಗೊಂಡ ಮನೆಗಳನ್ನು ಪಡೆದ ತಮಿಳು ಮೂಲದ ಫಲಾನುಭವಿಗಳನ್ನು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಸೋಮವಾರ ಭೇಟಿಯಾದರು. ರಾಧಾಕೃಷ್ಣನ್ ಅವರು ಎರಡು ದಿನ ಶ್ರೀಲಂಕಾಕ್ಕೆ ಭೇಟಿ ನೀಡಿದ್ದು, ಅಲ್ಲಿನ ನುವಾರಾ ಎಲಿಯಾ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ‘ಶ್ರೀಲಂಕಾದ ತಮಿಳು ಜನರಿಗಾಗಿ ಭಾರತ ಸರ್ಕಾರವು ಈವರೆಗೆ 50,000 ಮನೆಗಳನ್ನು ನಿರ್ಮಿಸಿದೆ.
ಯೋಜನೆಯ ನಾಲ್ಕನೇ ಹಂತದಲ್ಲಿ 10,000 ಮನೆಗಳನ್ನು ಹಸ್ತಾಂತರಿಸಲಾಗು ವುದು’ ಎಂದು ರಾಧಾಕೃಷ್ಣನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ಹಲವು ಒಪ್ಪಂದಗಳಿಗೆ ಸಹಿ: ರಾಧಾಕೃಷ್ಣನ್ ಅವರು ದ್ವೀಪ ರಾಷ್ಟ್ರ ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ಡಿಸ್ಸಾನಾಯಕೆ ಅವರೊಂದಿಗೆ ಸಮಾಲೋಚನೆ ನಡೆಸಿ, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವು ಒಪ್ಪಂದಗಳಿಗೆ ಸಹಿ ಮಾಡಿದರು. ಶ್ರೀಲಂಕಾದಲ್ಲಿ ಅನುಷ್ಠಾನಗೊಂಡಿರುವ ಭಾರತದ ಯೋಜನೆಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು.