Select Location
All Locations
State
Region
City / District
ಅಮೆರಿಕ ಜತೆ ಮಾತುಕತೆಗೆ ಇರಾನ್‌ ಹಿಂದೇಟು: ಹೊರ್ಮುಜ್‌ ನಿರ್ಬಂಧ ಮುಂದುವರಿಕೆ

ಅಮೆರಿಕ ಜತೆ ಮಾತುಕತೆಗೆ ಇರಾನ್‌ ಹಿಂದೇಟು: ಹೊರ್ಮುಜ್‌ ನಿರ್ಬಂಧ ಮುಂದುವರಿಕೆ

ಇಸ್ಲಾಮಾಬಾದ್/ದುಬೈ: ಹೊರ್ಮುಜ್‌ ಜಲಸಂಧಿ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನ ಸ್ಥಿತಿ ಮತ್ತಷ್ಟು ಹೆಚ್ಚಿರುವುದರಿಂದ ಎರಡನೇ ಸುತ್ತಿನ ಮಾತುಕತೆ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ಅಮೆರಿಕವು ಮಾತುಕತೆಗೆ ಉತ್ಸುಕತೆ ತೋರಿದೆಯಾದರೂ, ಇರಾನ್‌ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈ ನಡುವೆ, ಇರಾನ್‌ನ ಸರಕು ಸಾಗಣೆ ಹಡಗನ್ನು ಅಮೆರಿಕ ಸೇನೆ ತನ್ನ ವಶಕ್ಕೆ ತೆಗೆದುಕೊಂಡಿರುವುದು ಹೊಸ ಸಂಘರ್ಷದ ಆತಂಕ ಮೂಡಿಸಿದೆ. ಇರಾನ್‌ನ ಬಂದರುಗಳ ಮೇಲೆ ತಾನು ವಿಧಿಸಿರುವ ದಿಗ್ಬಂಧನವನ್ನು ಉಲ್ಲಂಘಿಸಿರುವುದಕ್ಕೆ ಹಡಗನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಮೆರಿಕ ಹೇಳಿದೆ. ಈ ಕ್ರಮಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್‌ ಎಚ್ಚರಿಸಿದ್ದು, ಹೊರ್ಮುಜ್‌ ಜಲಸಂಧಿ ಮೇಲಿನ ತನ್ನ ಹಿಡಿತ ಬಿಗಿಗೊಳಿಸಿದೆ. 

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿರುವಂತೆ ಎರಡನೇ ಸುತ್ತಿನ ಮಾತುಕತೆಯು ಇಸ್ಲಾಮಾಬಾದ್‌ನಲ್ಲಿ ಮಂಗಳವಾರ ಬೆಳಿಗ್ಗೆ ಆರಂಭವಾಗಬೇಕು. ‘ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ನೇತೃತ್ವದ ಅಮೆರಿಕ ನಿಯೋಗವು ಶೀಘ್ರದಲ್ಲೇ ಪಾಕಿಸ್ತಾನ ತಲುಪಲಿದೆ’ ಎಂದು ಟ್ರಂಪ್‌, ಸೋಮವಾರ ‘ನ್ಯೂಯಾರ್ಕ್‌ ಪೋಸ್ಟ್‌’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ‘ಶಾಂತಿ ಒಪ್ಪಂದ ಸಾಧ್ಯವಾದರೆ ಇರಾನ್‌ನ ನಾಯಕರನ್ನು ಸ್ವತಃ ಭೇಟಿಯಾಗುವುದನ್ನು ಎದುರು ನೋಡುತ್ತಿದ್ದೇನೆ’ ಎಂದೂ ಹೇಳಿದ್ದಾರೆ. ಆದರೆ, ಮಾತುಕತೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಇರಾನ್‌, ಸೋಮವಾರ ರಾತ್ರಿಯವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

‘ಅಮೆರಿಕದ ಜತೆ ಎರಡನೇ ಸುತ್ತಿನ ಮಾತುಕತೆಯಲ್ಲಿ ಪಾಲ್ಗೊಳ್ಳುವ ತೀರ್ಮಾನವನ್ನು ಇದುವರೆಗೆ ಮಾಡಿಲ್ಲ’ ಎಂದು ಇರಾನ್‌ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಖಾಯಿ ಹೇಳಿದ್ದಾರೆ. ‘ಅಮೆರಿಕದ ಜತೆ ಮಾತುಕತೆಯಲ್ಲಿ ಪಾಲ್ಗೊಳ್ಳುವುದನ್ನು ‘ಸಕಾರಾತ್ಮಕ’ವಾಗಿ ಪರಿಶೀಲಿಸಲಾಗುತ್ತಿದೆಯಾದರೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾತುಕತೆ ನಡೆಯುವ ಸಾಧ್ಯತೆ ಕಡಿಮೆ ಎಂದು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಇರಾನ್‌ನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.


Prajavani 1 hour ago
Home Flash News