ಧೋನಿ ಫಿಟ್, MI ವಿರುದ್ಧ ಆಡ್ತಾರೆ: ಸಂಜು ಪಾತ್ರವೇನು ಎಂದು ವಿವರಿಸಿದ ಅಶ್ವಿನ್
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ ಎರಡು ಯಶಸ್ವಿ ತಂಡಗಳು ನಾಳೆ (ಏಪ್ರಿಲ್ 23) ರಂದು ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ತಂಡದ ಮಾಜಿ ನಾಯಕ ಎಂ.ಎಸ್. ಧೊನಿ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದು, ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ ಎಂದು ತಂಡದ ಮಾಜಿ ಆಟಗಾರ ಆರ್. ಅಶ್ವಿನ್ ತಿಳಿಸಿದ್ದಾರೆ.
19ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈಗಾಗಲೇ 7 ಪಂದ್ಯಗಳನ್ನು ಆಡಿದೆ. ಅದರಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ. 5 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ‘ಥಲಾ’ ಧೋನಿ ಅವರನ್ನು ಮೈದಾನದಲ್ಲಿ ನೋಡಲು ಕಾದುಕುಳಿತಿರುವ ಅವರ ಅಭಿಮಾನಿಗಳಿಗೆ ಖುಶಿ ಸುದ್ದಿ ಸಿಗುವ ಸಾಧ್ಯತೆ ಇದೆ. ಅವರು ಗುರುವಾರ ನಡೆಯಲಿರುವ ಪಂದ್ಯದಲ್ಲಿ ಸಿಎಸ್‌ಕೆ ಪರ ಮೈದಾನಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಅಶ್ವಿನ್ ತಿಳಿಸಿದ್ದಾರೆ. ಧೋನಿ ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಎರಡನ್ನೂ ಅಭ್ಯಾಸ ಮಾಡುತ್ತಿದ್ದಾರೆ. ಅವರು ಮುಂದಿನ ಪಂದ್ಯದಲ್ಲಿ ಆಡುವುದು ಬಹುತೇಕ ದೃಢಪಟ್ಟಿದೆ. ಅವರು ಸಿಎಸ್‌ಕೆ ತಂಡದ ವಿದೇಶಿ ವೇಗಿಗಳಾದ ಮ್ಯಾಟ್ ಹೆನ್ರಿ ಮತ್ತು ಜೇಮಿ ಓವರ್ಟನ್ ಅವರನ್ನು ನೆಟ್ಸ್‌ನಲ್ಲಿ ಎದುರಿಸಿದ್ದಾರೆ ಮತ್ತು ಯಾವುದೇ ನೋವು ಇಲ್ಲದೆ ನಿರಾಳರಾದವರಂತೆ ಕಂಡುಬಂದಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅಶ್ವಿನ್, ‘ಧೋನಿ ಅವರು ನೆಟ್ಸ್‌ನಲ್ಲಿ ಕೀಪಿಂಗ್ ಮಾಡುವುದನ್ನು ನಾನು ಇದುವರೆಗೂ ನೋಡಿರಲಿಲ್ಲ. ಆದರೆ, ಇಂದು ಅವರು ಕೀಪಿಂಗ್ ಮಾಡುತ್ತಿದ್ದರು. ಇದನ್ನು ಗಮನಿಸಿದರೆ, ಅವರು ಮುಂದಿನ ಪಂದ್ಯದಲ್ಲಿ ಸಿಎಸ್‌ಕೆ ಪರ ವಿಕೆಟ್ ಕೀಪರ್ ಆಗಿ ಆಡುವ ಸಾಧ್ಯತೆ ಇದೆ ಮತ್ತು ಸಂಜು ಸ್ಯಾಮ್ಸನ್ ಕ್ಷೇತ್ರರಕ್ಷಕನಾಗಿ ಆಡಬೇಕಾಗುತ್ತದೆ ಎಥವಾ ಇಂಪ್ಯಾಕ್ಟ್ ಆಟಗಾರನಾಗಿ ಆಡುವ ಸಾಧ್ಯತೆ ಇದೆ’ ಎಂದಿದ್ದಾರೆ. ಮುಂಬೈಗೆ ವಿಲ್ ಜಾಕ್ಸ್ ಬಲ ಚೆನ್ನೈ ತಂಡಕ್ಕೆ ಎಂ.ಎಸ್. ಧೋನಿ ಬಲ ತಂಡುಕೊಟ್ಟರೆ, ಗಾಯಗೊಂಡು ತಂಡದಿಂದ ದೂರ ಉಳಿದಿದ್ದ ಆಲ್‌ರೌಂಡರ್ ವಿಲ್ ಜಾಕ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಕೂಡಿಕೊಂಡಿದ್ದಾರೆ. ಅವರು ತಂಡದ ಸಹ ಆಟಗಾರರ ಜೊತೆ ಅಭ್ಯಾಸ ಆರಂಭಿಸಿದ್ದಾರೆ. ಅವರು ಮುಂಬೈ ತಂಡದ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ.