Select Location
All Locations
State
Region
City / District
Annu Kapoor: ಆತ ಅದ್ಭುತ ನಟ, ಆದ್ರೆ ಕೆಟ್ಟ ಗಂಡ.. 'ಓಂ ಪುರಿ ನನ್ನ ತಂಗಿ ಲೈಫನ್ನು ನರಕ ಮಾಡ್ಬಿಟ್ರು'..!

Annu Kapoor: ಆತ ಅದ್ಭುತ ನಟ, ಆದ್ರೆ ಕೆಟ್ಟ ಗಂಡ.. 'ಓಂ ಪುರಿ ನನ್ನ ತಂಗಿ ಲೈಫನ್ನು ನರಕ ಮಾಡ್ಬಿಟ್ರು'..!

ಮುಂಬೈ: ಬಾಲಿವುಡ್‌ನ ಅಪ್ರತಿಮ ಪ್ರತಿಭೆ, ನಟನೆಯ ದೈತ್ಯ ಶಕ್ತಿ ಎಂದೇ ಕರೆಸಿಕೊಳ್ಳುವ ದಿವಂಗತ ಓಂ ಪುರಿ (Om Puri) ಅವರ ಕುರಿತಾಗಿ ಈಗ ಹಿರಿಯ ನಟ ಅಣ್ಣು ಕಪೂರ್ (Annu Kapoor) ಆಘಾತಕಾರಿ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ತೆರೆಯ ಮೇಲೆ ಅದ್ಭುತವಾಗಿ ನಟಿಸುತ್ತಿದ್ದ ಓಂ ಪುರಿ, ನಿಜ ಜೀವನದಲ್ಲಿ ಮಾತ್ರ ದ್ರೋಹಿಯಾಗಿದ್ದರು ಎನ್ನುವ ಕಹಿ ಸತ್ಯವನ್ನು ಅಣ್ಣು ಕಪೂರ್ ಹಂಚಿಕೊಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಓಂ ಪುರಿ ತಮ್ಮ ತಂಗಿ ಸೀಮಾ ಕಪೂರ್ ಅವರ ಜೀವನವನ್ನು ಹೇಗೆ ನರಕ ಮಾಡಿದರು ಎಂಬ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಅಣ್ಣು ಕಪೂರ್ ಅವರ ತಂಗಿ ಸೀಮಾ ಕಪೂರ್ ಅವರು ಓಂ ಪುರಿ ಅವರನ್ನು ವಿವಾಹವಾಗಿದ್ದರು. ಆದರೆ ಈ ದಾಂಪತ್ಯ ದೀರ್ಘಕಾಲ ಉಳಿಯಲಿಲ್ಲ. ಸಿದ್ಧಾರ್ಥ್ ಕಾನನ್ ಜೊತೆಗಿನ ಮಾತುಕತೆಯಲ್ಲಿ ಅಣ್ಣು ಕಪೂರ್, "ಓಂ ಪುರಿ ಒಬ್ಬ ಅದ್ಭುತ ನಟ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರಂತಹ ಶ್ರೇಷ್ಠ ನಟ ಮತ್ತೊಬ್ಬರಿಲ್ಲ. ಆದರೆ ವೈಯಕ್ತಿಕವಾಗಿ ಅವರು ನನ್ನ ತಂಗಿಗೆ ಮಹಾದ್ರೋಹ ಮಾಡಿದರು. ಗಂಡನಾದ ನಂತರ ಮತ್ತೊಬ್ಬ ಮಹಿಳೆಯ ಜೊತೆ ಸಂಬಂಧ ಬೆಳೆಸಿ ನನ್ನ ತಂಗಿಯ ಬದುಕನ್ನು ಹಾಳು ಮಾಡಿದರು. ನಾನು ಆ ನತದೃಷ್ಟ ಮಹಿಳೆಯ ಅಣ್ಣ," ಎಂದು ನೋವಿನಿಂದ ಹೇಳಿದ್ದಾರೆ.

ಗರ್ಭಿಣಿಯಾಗಿದ್ದಾಗಲೇ ದ್ರೋಹ: ಸೀಮಾ ಕಪೂರ್ ಕೂಡ ಈ ಹಿಂದೆ ತಮ್ಮ ಕಹಿ ನೆನಪುಗಳನ್ನು ಹಂಚಿಕೊಂಡಿದ್ದರು. 'ಸಿಟಿ ಆಫ್ ಜಾಯ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಓಂ ಪುರಿ ಅವರಿಗೆ ಪತ್ರಕರ್ತೆ ನಂದಿತಾ ಪುರಿ ಪರಿಚಯವಾಗಿದ್ದರು. ಇದು ಮುಂದೆ ಅಕ್ರಮ ಸಂಬಂಧಕ್ಕೆ ದಾರಿಯಾಗಿತ್ತು. "ನಾನು ಮೂರು ತಿಂಗಳ ಗರ್ಭಿಣಿಯಾಗಿದ್ದಾಗ ಓಂ ಪುರಿ ನನಗೆ ಫೋನ್ ಮಾಡಿ, ತಾವು ಬೇರೊಬ್ಬ ಮಹಿಳೆಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದರು. ಆ ಸಮಯದಲ್ಲಿ ನನಗೆ ದಿಕ್ಕು ತೋಚದಂತಾಗಿತ್ತು," ಎಂದು ಸೀಮಾ ವಿವರಿಸಿದ್ದರು. ಓಂ ಪುರಿ ಅವರ ಕುಡಿತದ ಚಟ ಮತ್ತು ನಂದಿತಾ ಪುರಿ ಅವರ ಹಸ್ತಕ್ಷೇಪ ತಾಳಲಾರದೆ ಸೀಮಾ ಕಪೂರ್ ಮನೆ ಬಿಟ್ಟಿದ್ದರು.

ಕೊನೆಯ ದಿನಗಳಲ್ಲಿ ಆಸರೆಯಾದದ್ದೇ ಸೀಮಾ: ವಿಚಿತ್ರವೆಂದರೆ, ಓಂ ಪುರಿ ಅವರು ತಮ್ಮ ಜೀವನದ ಅಂತಿಮ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾದಾಗ, ಅವರನ್ನು ಆರೈಕೆ ಮಾಡಿದ್ದು ಇದೇ ಸೀಮಾ ಕಪೂರ್. "ಓಂ ಪುರಿ ಅವರ ದೇಹ ಸುಸ್ತಾದಾಗ ಅವರು ಮತ್ತೆ ನನ್ನ ತಂಗಿಯ ಬಳಿಯೇ ಬಂದರು. ಅವಳೇ ಅವರನ್ನು ನೋಡಿಕೊಳ್ಳದಿದ್ದರೆ ಅವರು 10 ವರ್ಷಗಳ ಮೊದಲೇ ಸಾವನ್ನಪ್ಪುತ್ತಿದ್ದರು," ಎಂದು ಅಣ್ಣು ಕಪೂರ್ ಹೇಳಿದ್ದಾರೆ. 2017ರಲ್ಲಿ ಓಂ ಪುರಿ ನಿಧನರಾಗುವ ಮುನ್ನ ಸೀಮಾ ಅವರಲ್ಲಿ ಕ್ಷಮೆಯಾಚಿಸಿದ್ದರು ಎಂಬ ಮಾತುಗಳೂ ಇವೆ. ಪ್ರಸ್ತುತ ಅಣ್ಣು ಕಪೂರ್ ತಮಗೆ ಯಾರ ಮೇಲೂ ದ್ವೇಷವಿಲ್ಲ ಎಂದು ಹೇಳಿದ್ದರೂ, ತನ್ನ ತಂಗಿಯ ಬದುಕು ಹಾಳಾಯಿತು ಮತ್ತು ಆಕೆಗೆ ಯಾವುದೇ ಬೆಂಬಲವಿಲ್ಲ ಎನ್ನುವ ಕೊರಗು ಮಾತ್ರ ಅವರಲ್ಲಿ ಹಾಗೆಯೇ ಉಳಿದಿದೆ. ಬಾಲಿವುಡ್‌ನ ಈ ಕರಾಳ ಮುಖ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.


Asianet News 1 hour ago
Home Flash News