Select Location
All Locations
State
Region
City / District
ಮೂರು ನಗರ, ಮೂರು ದುರಂತ: ಪೋಕ್ಸೋ ಕೇಸ್ ಖೈದಿ ಜೈಲಿನಲ್ಲಿ ಆತ್ಮ*ಹತ್ಯೆ, ಪ್ರಿಯತಮೆ ಹಲ್ಲೆ ಮಾಡಿದ್ದಕ್ಕೆ ಪ್ರೇಮಿ ಸಾವು!

ಮೂರು ನಗರ, ಮೂರು ದುರಂತ: ಪೋಕ್ಸೋ ಕೇಸ್ ಖೈದಿ ಜೈಲಿನಲ್ಲಿ ಆತ್ಮ*ಹತ್ಯೆ, ಪ್ರಿಯತಮೆ ಹಲ್ಲೆ ಮಾಡಿದ್ದಕ್ಕೆ ಪ್ರೇಮಿ ಸಾವು!

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಖೈದಿಯೊಬ್ಬ ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಮೃತ ಖೈದಿಯನ್ನು ಮಹಾಂತೇಶ್ ಕುಂಬಾರ್ (29) ಎಂದು ಗುರುತಿಸಲಾಗಿದೆ. ಅವರು ಪೋಕ್ಸೋ (POCSO) ಪ್ರಕರಣದಡಿ ಬಂಧನಕ್ಕೊಳಗಾಗಿ ಕಾರಾಗೃಹದಲ್ಲಿ ಇರಿಸಲಾಗಿತ್ತು ಎನ್ನಲಾಗಿದೆ. ಆದರೆ, ಜೈಲಿನಲ್ಲಿದ್ದ ಸಂದರ್ಭದಲ್ಲಿ ಮಹಾಂತೇಶ್ ಕುಂಬಾರ್ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಧಾರವಾಡ ಉಪನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆತ್ಮ*ಹತ್ಯೆಗೆ ಕಾರಣಗಳ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಕಾರಾಗೃಹದ ಒಳಾಂಗಣ ಪರಿಸ್ಥಿತಿ ಹಾಗೂ ಘಟನೆಯ ಹಿನ್ನೆಲೆ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ಬಳಿಕ ಆತ್ಮ*ಹತ್ಯೆಯ ನಿಖರ ಕಾರಣ ಬಹಿರಂಗವಾಗುವ ಸಾಧ್ಯತೆ ಇದೆ. ಈ ಘಟನೆ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಶಿವಮೊಗ್ಗ: ಪ್ರೀತಿ ನಿರಾಕರಣೆ ಹಾಗೂ ಯುವತಿಯ ಕುಟುಂಬದವರಿಂದ ಹಲ್ಲೆಗೆ ಒಳಗಾಗಿ ಮನನೊಂದ ಯುವಕನೊಬ್ಬ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿಕಾರಿಪುರ ನಿವಾಸಿ ಶಬರೀಶ್ (28) ಮೃತ. ತೀರ್ಥಹಳ್ಳಿಯಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಶಬರೀಶ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಪ್ರೇಮಕ್ಕೆ ಮನೆಯವರ ವಿರೋಧವಿತ್ತು. ಈ ಮಧ್ಯೆ ಯುವತಿಯು ಶಬರೀಶ್‌ಗೆ ಕರೆ ಮಾಡಿ, ನಿನ್ನ ಬಳಿ ಮಾತನಾಡಬೇಕು. ಶಿವಮೊಗ್ಗದ ಬಸ್ ನಿಲ್ದಾಣಕ್ಕೆ ಬಾ ಎಂದಿದ್ದಳು. ಶಬರೀಶ್ ಅಲ್ಲಿಗೆ ಹೋದಾಗ ಮಾತಿನ ಚಕಮಕಿ ನಡೆದಿದ್ದು, ತನ್ನ ಸಂಬಂಧಿಕರೊಂದಿಗೆ ಸೇರಿ ಶಬರೀಶ್ ಮೇಲೆ ಯುವತಿ ಹಲ್ಲೆ ನಡೆಸಿದ್ದಾಳೆ. ಇದರಿಂದ ಮನನೊಂದ ಶಬರೀಶ್, ಬಸ್ ನಿಲ್ದಾಣದಲ್ಲೇ ವಿಷ ಸೇವಿಸಿದ್ದ. ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಏ.22ರಂದು ಶಬರೀಶ್ ಮೃತಪಟ್ಟಿದ್ದಾನೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ: ಮೊಬೈಲ್‌ನಲ್ಲಿ ಆನ್‌ಲೈನ್ ಗೇಮ್ ಆಡಬೇಡ ಎಂದು ಪೋಷಕರು ಬೈದಿದ್ದಕ್ಕೆ ಬಾಲಕನೋರ್ವ ನೇಣು ಬಿಗಿದು ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ಇಲ್ಲಿನ ಉದಯನಗರದಲ್ಲಿ ನಡೆದಿದೆ. ಸಮರ್ಥ ಪಟಕೆ (14) ಮೃತ ಬಾಲಕ. ಈತ ಹೆಚ್ಚಾಗಿ ಮೊಬೈಲ್‌ನಲ್ಲಿ ವೀಡಿಯೋ ಗೇಮ್ ಆಡುತ್ತಿದ್ದ. ಇದರಿಂದ ವಿದ್ಯಾಭ್ಯಾಸ ಹಾಳಾಗುತ್ತದೆ ಎಂದು ಪಾಲಕರು ಬುದ್ಧಿ ಹೇಳಿದ್ದರು, ಅಷ್ಟಾದರೂ ಬಿಟ್ಟಿರಲಿಲ್ಲ. ಗುರುವಾರ ರಾತ್ರಿ 9.30ಕ್ಕೆ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದ ವೇಳೆ ಆತನ ತಾಯಿ ಬೈದು ಮೊಬೈಲ್ ಕಸಿದುಕೊಂಡಿದ್ದಾರೆ. ಇದೇ ವಿಚಾರಕ್ಕೆ ಮನನೊಂದು ನೇಣಿಗೆ ಶರಣಾಗಿದ್ದಾನೆ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.


Asianet News 1 hour ago
Home Flash News