ಅವರು ಸಂಘದ ಅತ್ಯುತ್ತಮ ಪ್ರತಿನಿಧಿ.. ಪಿಎಂ ಮೋದಿಯನ್ನು ಹಾಡಿ ಹೊಗಳಿದ ಹೊಸಬಾಳೆ
ವಾಷಿಂಗ್ಟನ್: 'ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಒಬ್ಬ ಅತ್ಯುತ್ತಮ ಪ್ರತಿನಿಧಿ, ಅವರು ಸಂಘದ ತತ್ವ–ಸಿದ್ಧಾಂತಗಳನ್ನು ಅವರದೇಯಾದ ಮಾರ್ಗದಲ್ಲಿ ಹಾಗೂ ವಿಶಿಷ್ಟವಾಗಿ ಜಾರಿಗೊಳಿಸುತ್ತಿದ್ದಾರೆ' ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಅಮೆರಿಕದ ವಾಷಿಂಗ್ಟನ್‌ನಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹೊಸಬಾಳೆ ಅವರು ಮೋದಿ ಅವರನ್ನು ಹಾಡಿ ಹೊಗಳಿದರು. 'ಅವರು (ಮೋದಿ) ನಾವು ಎಂದುಕೊಂಡಿರುವ ಹಲವು ಕೆಲಸಗಳನ್ನು ತಮ್ಮದೇಯಾದ ಮಾರ್ಗದಲ್ಲಿ ಮಾಡುತ್ತಿದ್ದಾರೆ. ಅವೆಲ್ಲವೂ ತುಂಬಾ ವಿಶಿಷ್ಟವಾಗಿವೆ. ಉದಾಹರಣಗೆ, ‘ನಾವು ಸಸಿ ನೆಡಿ’ ಎನ್ನುತ್ತೇವೆ, ಅವರು ‘ತಾಯಿ ಹೆಸರಲ್ಲಿ ಒಂದು ಗಿಡ ನೆಡಿ’ ಎನ್ನುತ್ತಾರೆ.
ಇಷ್ಟೇ ವ್ಯತ್ಯಾಸ ಎಂದು ಮುಗುಳ್ನಗೆ ಬೀರಿದರು. ‘ಆರ್‌ಎಸ್‌ಎಸ್ ಮಾಡಬೇಕೆಂದುಕೊಂಡಿರುವ ಅನೇಕ ಕೆಲಸಗಳು ಮೋದಿ ಸರ್ಕಾರದಲ್ಲಿ ಆಗುತ್ತಿರುವುದನ್ನು ನಾವು ಕಾಣುತ್ತೇವೆ. ಅದಕ್ಕೆ ಪ್ರಮುಖ ಉದಾಹರಣೆಯೇ ‘ಆತ್ಮ ನಿರ್ಭರ್ ಭಾರತ್’. ಮೋದಿ ಅವರು ಸಂಘದ ಒಬ್ಬ ಅತ್ಯತ್ತಮ ಪ್ರತಿನಿಧಿಯಾಗಿರುವುದರಿಂದ ಇವೆಲ್ಲ ಸಹಜವಾಗಿಯೇ ಅವರಲ್ಲಿವೆ ಎಂದು ಅವರು ಸಮರ್ಥಿಸಿಕೊಂಡರು. ‘ನರೇಂದ್ರ ಮೋದಿ ಅವರು ಚುನಾಯಿತ ಪ್ರತಿನಿಧಿಯಾಗಿರಬಹುದು. ಆದರೆ, ತಮ್ಮ ಬೇರುಗಳು ಎಲ್ಲಿವೆ? ಹಾಗೂ ಸಂಘ ಏನನ್ನು ಪ್ರತಿನಿಧಿಸುತ್ತದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ’ ಎಂದರು.
‘ಜನತಾ ಪಕ್ಷದಿಂದ ಹೊರ ಬಂದು 1980 ರಲ್ಲಿ ಬಿಜೆಪಿ ರಚನೆಯಾದಾಗ ಅದರ ಸ್ಥಾಪಕರು ಆರ್‌ಎಸ್‌ಎಸ್‌ನೊಂದಿಗಿನ ಹೊಕ್ಕಳುಬಳ್ಳಿಯ ಸಂಬಂಧವನ್ನು ಹರಿದುಕೊಳ್ಳಲು ಬಯಸಿರಲಿಲ್ಲ’ ಎಂದು ಸ್ಮರಿಸಿಕೊಂಡರು. ‘ಮುಂದಿನ 25 ವರ್ಷಗಳ ಕಾಲ ಐದು ಪ್ರಮುಖ ಕ್ಷೇತ್ರಗಳ ಪುನರುಜ್ಜೀವನಕ್ಕೆ ಆರ್‌ಎಸ್‌ಎಸ್ ಗುರಿ ಹಾಕಿಕೊಂಡಿದೆ. ಅವುಗಳಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ಒಗ್ಗಟ್ಟಿಗಾಗಿ ಕೆಲಸ ಮಾಡುವುದು, ಸ್ವಯಂ ಅರಿವು ಮೂಡಿಸುವುದು, ದೇಶವಾಸಿಗಳಲ್ಲಿ ವಸಾಹತುಶಾಹಿ ಮನಸ್ಥಿತಿಯನ್ನು ತೊಡೆದುಹಾಕಿ ನಾಗರಿಕ ಪ್ರಜ್ಞೆಯನ್ನು ಹುಟ್ಟುಹಾಕುವುದು ಹಾಗೂ ಕುಟುಂಬ ಮೌಲ್ಯಗಳನ್ನು ಬಲಪಡಿಸುವುದು ಮತ್ತು ಸುಸ್ಥಿರ ಅಭಿವೃದ್ಧಿ ಮಾದರಿಗಳನ್ನು ಅನುಸರಿಸುವುದು ಸೇರಿವೆ’ ಎಂದು ಅವರು ಹೇಳಿದರು.