ನ್ಯಾ. ಶರ್ಮಾ ಮುಂದೆ ವಿಚಾರಣೆಗೆ ಹಾಜರಾಗಲ್ಲ: ಕೇಜ್ರಿವಾಲ್ ಬೆನ್ನಲ್ಲೇ ಸಿಸೋಡಿಯಾ
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಮುಂದೆ ಖುದ್ದಾಗಿ ಅಥವಾ ವಕೀಲರ ಮೂಲಕವಾಗಿ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಮಂಗಳವಾರ ತಿಳಿಸಿದ್ದಾರೆ.
ರ್ಣಕಾಂತ ಶರ್ಮಾ ಅವರ ಮುಂದೆ ವಿಚಾರಣೆ ಹಾಜರಾಗುವುದಿಲ್ಲ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ನಿರ್ಧರಿಸಿದ ಮರುದಿನವೇ ಸಿಸೋಡಿಯಾ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ಶರ್ಮಾ ಅವರಿಗೆ ಸಿಸೋಡಿಯಾ ಪತ್ರ ಬರೆದಿದ್ದಾರೆ. ‘ವಿಚಾರಣೆಗೆ ನಾನು ಖುದ್ದಾಗಿ ಹಾಜರಾಗುವುದಿಲ್ಲ ಮತ್ತು ನನ್ನ ಪರವಾಗಿಯೂ ಯಾವುದೇ ವಕೀಲರು ಹಾಜರಿರುವುದಿಲ್ಲ. ನಿಮ್ಮ ಮಕ್ಕಳ ಭವಿಷ್ಯ ತುಷಾರ್ ಮೆಹ್ತಾ ಅವರ ಕೈಯಲ್ಲಿದೆ’ ಎಂದು ಸಿಸೋಡಿಯಾ ಹೇಳಿದ್ದಾರೆ.
‘ನಿಮ್ಮಿಂದ ನಾನು ನ್ಯಾಯವನ್ನು ನಿರೀಕ್ಷಿಸುತ್ತಿಲ್ಲ. ಸತ್ಯಾಗ್ರಹವನ್ನು ಹೊರತುಪಡಿಸಿ ಬೇರೆ ಯಾವುದೇ ದಾರಿ ಉಳಿದಿಲ್ಲ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ಶರ್ಮಾ ಅವರು ತಿರಸ್ಕರಿಸಿದ್ದರು.