ಬಂಗಾಳದಲ್ಲಿ ಯುಪಿ 'ಸಿಂಗಂ' ಅಬ್ಬರ: ಯಾರು ಈ ಎನ್‌ಕೌಂಟರ್ ಸ್ಪೆಷಲಿಸ್ಟ್ ಅಜಯ್ ಪಾಲ್ ಶರ್ಮಾ?
ಪಶ್ಚಿಮ ಬಂಗಾಳದ ಹೈವೋಲ್ಟೇಜ್ ಚುನಾವಣಾ ಕಣದಲ್ಲಿ ಈಗ ಉತ್ತರ ಪ್ರದೇಶದ ಖಡಕ್ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಅವರ ಹೆಸರು ಭಾರಿ ಸಂಚಲನ ಮೂಡಿಸುತ್ತಿದೆ. ಇವರನ್ನು ಚುನಾವಣಾ ಆಯೋಗವು ದಕ್ಷಿಣ 24 ಪರಗಣ ಜಿಲ್ಲೆಯ ವಿಶೇಷ ವೀಕ್ಷಕರನ್ನಾಗಿ ನೇಮಕ ಮಾಡಿದ ಬೆನ್ನಲ್ಲೇ ರಾಜಕೀಯ ಕಿಡಿ ಹೊತ್ತಿಕೊಂಡಿದೆ. ವಿಶೇಷವಾಗಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಈ ಅಧಿಕಾರಿಯ ವಿಚಾರವಾಗಿ ದೊಡ್ಡ ಮಟ್ಟದ ವಾಕ್ಸಮರವೇ ನಡೆಯುತ್ತಿದೆ. ದಕ್ಷಿಣ 24 ಪರಗಣ ಜಿಲ್ಲೆಯು ಟಿಎಂಸಿಯ ಭದ್ರಕೋಟೆಯಾಗಿದ್ದು, ಇಲ್ಲಿನ ಶಾಂತಿ ಸುವ್ಯವಸ್ಥೆ ಕಾಪಾಡಲು ಆಯೋಗವು ಈ 'ದಬಾಂಗ್' ಅಧಿಕಾರಿಯನ್ನು ಕಣಕ್ಕಿಳಿಸಿದೆ.
ವೈದ್ಯಕೀಯ ವೃತ್ತಿಯಿಂದ ಪೊಲೀಸ್ ಸೇವೆಗೆ! ಮೂಲತಃ ಪಂಜಾಬ್‌ನ ಲೂಧಿಯಾನದವರಾದ ಅಜಯ್ ಪಾಲ್ ಶರ್ಮಾ ಅವರ ಹಿನ್ನೆಲೆ ಬಹಳ ರೋಚಕವಾಗಿದೆ. ಇವರು ಐಪಿಎಸ್ ಅಧಿಕಾರಿಯಾಗುವ ಮೊದಲು ದಂತವೈದ್ಯರಾಗಿದ್ದರು ಎಂಬುದು ವಿಶೇಷ. ಇವರ ತಂದೆ-ತಾಯಿಯ ಆಸೆಯಂತೆ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ ಅಜಯ್ 2011ರಲ್ಲಿ ಪೊಲೀಸ್ ಸೇವೆಗೆ ಆಯ್ಕೆಯಾದರೆ, ಇವರ ಸಹೋದರ ಐಎಎಸ್ ಅಧಿಕಾರಿಯಾಗಿ ನೇಮಕಗೊಂಡರು. ಪ್ರಸ್ತುತ ಪ್ರಯಾಗ್‌ರಾಜ್‌ನಲ್ಲಿ ಅಡಿಷನಲ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಜಯ್ ಅವರು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಆಡಳಿತದಲ್ಲಿ ಅತಿ ಹೆಚ್ಚು ಎನ್‌ಕೌಂಟರ್ ನಡೆಸಿದ ಅಧಿಕಾರಿಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ಸರಿಸುಮಾರು 9ಕ್ಕೂ ಹೆಚ್ಚು ಎನ್‌ಕೌಂಟರ್ ಮತ್ತು 190ಕ್ಕೂ ಹೆಚ್ಚು ಕ್ರಿಮಿನಲ್‌ಗಳನ್ನು ಗುಂಡಿನ ಚಕಮಕಿಯಲ್ಲಿ ಭಾಗಿಯಾದ ದಾಖಲೆ ಇವರ ಹೆಸರಿನಲ್ಲಿದೆ. ಅಜಯ್ ಪಾಲ್ ಶರ್ಮಾ ಅವರು ಮೊದಲು ಬೆಳಕಿಗೆ ಬಂದಿದ್ದು 2018ರಲ್ಲಿ ರಾಂಪುರದಲ್ಲಿ ನಡೆದ ಕಾರ್ಯಾಚರಣೆಯ ಮೂಲಕ. ಅಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿಯನ್ನು ಸತತವಾಗಿ ಬೆನ್ನಟ್ಟಿ, ಗುಂಡಿನ ಚಕಮಕಿಯ ನಂತರ ಬಂಧಿಸುವಲ್ಲಿ ಇವರು ಯಶಸ್ವಿಯಾಗಿದ್ದರು.