Select Location
All Locations
State
Region
City / District
BS Yadiyurappa: ಅವರ ಹೋರಾಟವೇ ಪ್ರತ್ಯೇಕ ಇತಿಹಾಸ; ಸಹೃದಯ ರಾಜಕಾರಣದ ಮೇರು ನಾಯಕ ಬಿಎಸ್‌ವೈ

BS Yadiyurappa: ಅವರ ಹೋರಾಟವೇ ಪ್ರತ್ಯೇಕ ಇತಿಹಾಸ; ಸಹೃದಯ ರಾಜಕಾರಣದ ಮೇರು ನಾಯಕ ಬಿಎಸ್‌ವೈ

ಪ್ರಜಾಪ್ರಭುತ್ವದಲ್ಲಿ ಜನರ ಮನಸ್ಸನ್ನು ಗೆದ್ದು ಮತಗಳನ್ನು ಪಡೆದು ವಿಧಾನಸೌಧ ಪ್ರವೇಶಿಸುವುದು ಸುಲಭದ ಮಾತಲ್ಲ. ನಿರಂತರ ಜನಸೇವೆ, ಜನರ ಮಾತಿಗೆ ಕಿವಿಯಾಗುವುದು, ಸದಾ ರಾಜ್ಯದ ಅಭ್ಯುದಯದ ಚಿಂತನೆ ಹಾಗೂ ರಾಜಕೀಯದ ರಣತಂತ್ರಗಳ ಮೂಲಕ ಮಾತ್ರ ಒಬ್ಬ ರಾಜಕಾರಣಿ ಜನನಾಯಕನಾಗಿ ಬೆಳೆಯಲು ಸಾಧ್ಯ. ಅಂತಹ ಸುದೀರ್ಘ ರಾಜಕಾರಣವನ್ನು ನಡೆಸಿದ ರಾಜ್ಯ ರಾಜಕಾರಣದ ಭೀಷ್ಮ ಬಿ.ಎಸ್‌.ಯಡಿಯೂರಪ್ಪ. ಅವರೀಗ ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುವ ಉನ್ನತ ಸ್ಥಾನದಲ್ಲಿದ್ದಾರೆ. ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಕ್ಕಿಳಿದಾಗ ನಿವೃತ್ತಿ ಬದುಕು ಆರಂಭವಾಯಿತು ಎಂದು ವ್ಯಾಖ್ಯಾನಿಸಲಾಗಿತ್ತು. ಆದರೆ ಇಂದಿಗೂ ಬಿಎಸ್‌ವೈ ಎಂದರೆ ಸಕ್ರಿಯ ರಾಜಕಾರಣದ ಶಕ್ತಿ ಎಂದೇ ಹೆಸರಾಗಿದ್ದಾರೆ. ಇಂದಿಗೂ ಬಿಎಸ್‌ವೈ ಹೆಸರು ಕೇಳಿದರೆ ಸಕ್ರಿಯವಾಗಿರುವ, ಕ್ರಿಯಾಶೀಲವಾಗಿರುವ ಬಿಜೆಪಿಯ ನಾಯಕ ಎಂದೇ ಹೇಳಲಾಗುತ್ತದೆ. 

ನಿವೃತ್ತಿ ಎನ್ನುವ ಪದ ಅವರ ಬಳಿ ಇಂದಿಗೂ ಸುಳಿದಿಲ್ಲ. ಅಂತಹ ಮೇರು ನಾಯಕನ ಬರೋಬ್ಬರಿ ಐವತ್ತು ವರ್ಷಗಳ ರಾಜಕೀಯ ಬದುಕಿಗೆ ಗೌರವ ಸಲ್ಲಿಸಲು ಬಿಜೆಪಿ ವತಿಯಿಂದ ಮೇ 9ರಂದು ಚಿತ್ರದುರ್ಗದಲ್ಲಿ ʼಬಿಎಸ್‌ವೈ ಅಭಿಮಾನೋತ್ಸವʼ ನಡೆಸಲಾಗುತ್ತಿದೆ. ಇದು ಕೇವಲ ಕಾರ್ಯಕರ್ತರು ನಡೆಸುವ ಸಮಾವೇಶವಲ್ಲ ಅಥವಾ ಮುಂದಿನ ಚುನಾವಣೆಗಾಗಿ ಮಾಡುವ ಶಕ್ತಿ ಪ್ರದರ್ಶನದ ವೇದಿಕೆಯಲ್ಲ. ಇದು ಕೋಟ್ಯಂತರ ಜನರು ಸೇರಿ ಸಲ್ಲಿಸುತ್ತಿರುವ ಕೃತಜ್ಞತೆ. ಅವರು ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ನಾವೆಲ್ಲರೂ ಸೇರಿ ಸಲ್ಲಿಸುತ್ತಿರುವ ಸಣ್ಣ ಧನ್ಯವಾದ. ಬಿ.ಎಸ್‌.ಯಡಿಯೂರಪ್ಪ ಎಂದರೆ ರೈತ ನಾಯಕ, ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಪ್ರತಿಮವಾಗಿ ಸಂಘಟಿಸಿ ಬೆಳೆಸಿದ ಸಂಘಟನಾ ಚತುರ, ಸದನದಲ್ಲಿ ಮರೆಯಲಾರದಂತಹ ವಾಕ್‌ ಚಾತುರ್ಯ ತೋರಿದ ಪಟು, ಕಟು ಸನ್ನಿವೇಶಗಳನ್ನು ಸುಲಭವಾಗಿ ನಿಭಾಯಿಸಿದ ಛಲಗಾರ, ಹೀಗೆ ಅನೇಕ ರೀತಿಯಲ್ಲಿ ಬಿಎಸ್‌ವೈ ದೊಡ್ಡ ಸ್ಪೂರ್ತಿಯಾಗಿ ಹೊರಹೊಮ್ಮುತ್ತಾರೆ. ಆದರೆ ವೈಯಕ್ತಿಕವಾಗಿ ನನ್ನ ಪಾಲಿಗೆ ಅವರು ಮಹಾನ್‌ ಗುರು ಹಾಗೂ ಮಾರ್ಗದರ್ಶಕ. 

ಕೋವಿಡ್‌ ಸವಾಲು: ಕೋವಿಡ್‌ನಂತಹ ಸನ್ನಿವೇಶವನ್ನು ಎದುರಿಸುವ ಹೊಣೆ ಬೇರೆಯವರಿಗೆ ಬಂದಿದ್ದರೆ ಭಯ ಪಡುತ್ತಿದ್ದರೋ ಏನೋ. ಆದರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಕೋವಿಡ್‌ ಸನ್ನಿವೇಶವನ್ನು ನಿಭಾಯಿಸಿದ್ದು ಅಧ್ಯಯನ ಯೋಗ್ಯವಾದ ವಿಷಯ. ಕೋವಿಡ್‌ ಆರಂಭವಾದ ಸಮಯದಲ್ಲಿ ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದೆ. ಶ್ರೀರಾಮುಲು ಅವರ ಬಳಿ ಆರೋಗ್ಯ ಖಾತೆ ಇತ್ತು. ಶತಮಾನದ ಅತ್ಯಂತ ಭೀಕರ ಸಾಂಕ್ರಾಮಿಕ ರೋಗದ ಪರಿಸ್ಥಿತಿ ಇರುವಾಗ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಎರಡೂ ಇಲಾಖೆಗಳು ಒಬ್ಬರ ಬಳಿ ಇರುವುದು ನಿರ್ವಹಣೆ ದೃಷ್ಟಿಯಿಂದ ಸೂಕ್ತ ಎಂದು ಅನೇಕ ತಜ್ಞರು ಅಭಿಪ್ರಾಯ ಪಟ್ಟಾಗ, ಶ್ರೀರಾಮುಲು ಅವರಂತಹ ಹಿರಿಯ ಸಚಿವರ ಮನವೊಲಿಸಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡದೆ, ಎರಡೂ ಇಲಾಖೆಗಳ ಜವಾಬ್ದಾರಿ ನನಗೆ ಕೊಟ್ಟರು. 

ಇದು ಅವರ ರಾಜಕೀಯ ಮತ್ತು ಆಡಳಿತಾತ್ಮಕ ಪ್ರಬುದ್ಧತೆಗೆ ಸಾಕ್ಷಿ. ಆ ಸಂದರ್ಭ ಹೇಗಿತ್ತು ಎಂದರೆ, ವೈದ್ಯರು, ಶುಶ್ರೂಷಕರು, ಅಧಿಕಾರಿಗಳು ಹೀಗೆ ಎಲ್ಲರೂ ಭೀತಿಯಲ್ಲಿದ್ದರು. ಲಾಕ್‌ಡೌನ್‌ನಿಂದಾಗಿ ಆರ್ಥಿಕ ವ್ಯವಸ್ಥೆ ಕೆಳಕ್ಕೆ ಇಳಿದುಹೋಗಿತ್ತು. ಅಂತಹ ಸಮಯದಲ್ಲಿ ಯಡಿಯೂರಪ್ಪನವರು ಪ್ರತಿ ದಿನ ನನ್ನನ್ನು ಕರೆದು ಆರೋಗ್ಯ ಕ್ಷೇತ್ರದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಸಲಹೆ, ಸೂಚನೆಗಳನ್ನು ನೀಡುತ್ತಿದ್ದರು. ವೈದ್ಯರು, ಅಧಿಕಾರಿಗಳಿಗೆ ಧೈರ್ಯ ತುಂಬಿ ಕೋವಿಡ್‌ ಸ್ಥಿತಿಯನ್ನು ನಿಭಾಯಿಸಲು ಹುರಿದುಂಬಿಸುತ್ತಿದ್ದರು. ಅವರು ಕೋವಿಡ್ ಸೋಂಕಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದರು. ಅನೇಕ ಬಾರಿ ಹಗಲು-ರಾತ್ರಿ ಎನ್ನದೆ ಮುಂಜಾನೆ 6 ಗಂಟೆಗೆ, ತಡರಾತ್ರಿ 1-2 ಗಂಟೆಗೆ ಸಭೆಗಳನ್ನು ನಡೆಸಿ ಜನರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. 

ಪ್ರತಿದಿನ ಸಂಜೆ ಅವರ ಗೃಹ ಕಚೇರಿಯಲ್ಲಿ ನಾನು, ಬೊಮ್ಮಾಯಿ ಅವರು, ಅಶೋಕ್ ಅವರು ಸೇರಿದಂತೆ ಸಂಪುಟದ ಹಿರಿಯ ಸಚಿವರು, ವಿಜಯೇಂದ್ರ ಸೇರಿ ಗಂಟೆಗಟ್ಟಲೆ ಸಭೆ ನಡೆಸುತ್ತಿದ್ದೆವು. ಅದರಿಂದಾಗಿ ಕೋವಿಡ್‌ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಲು ನನಗೆ ಸಾಧ್ಯವಾಯಿತು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವನಾಗಿ ಜನರು ನನ್ನ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಆಕ್ಸಿಜನ್‌ ಕೊರತೆ, ಹಾಸಿಗೆಗಳ ಕೊರತೆ, ಆ್ಯಂಬುಲೆನ್ಸ್‌, ಕೋವಿಡ್‌ ಸೆಂಟರ್‌ಗಳ ನಿರ್ಮಾಣ, ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳ ಪೂರೈಕೆ, ಔಷಧಿ ಪೂರೈಕೆ ಹೀಗೆ ಒಂದರ ಮೇಲೆ ಒಂದರಂತೆ ಸವಾಲುಗಳು ಬಂದಾಗ ಅವುಗಳನ್ನು ಮೆಟ್ಟಿ ನಿಂತು ಪರಿಹರಿಸಲು ಬಿಎಸ್‌ವೈ ನನ್ನ ಹಿಂದೆ ಶಕ್ತಿಯಾಗಿ ನಿಂತಿದ್ದರು.


Asianet News 1 hour ago
Home Flash News