ವಿಜಯ್ ತಮಿಳುನಾಡು ಸಿಎಂ ಪಟ್ಟಕ್ಕೇರಿದ ಬೆನ್ನಲ್ಲೇ 'ಜನ ನಾಯಗನ್' ಚಿತ್ರ ಬಿಡುಗಡೆಗೆ ಸಿದ್ಧತೆ, ನಿರ್ಮಾಪಕರ ಸ್ಪಷ್ಟನೆ!
ತಮಿಳು ಚಿತ್ರರಂಗದ ಖ್ಯಾತ ನಟನಾಗಿ ಈಗ ರಾಜಕೀಯ ನಾಯಕನಾಗಿ ಮೆರೆಯುತ್ತಿರುವ ತಮಿಳುನಾಡಿನ ನೂತನ ಸಿಎಂ ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಅವರ ಬಹುಕಾಲದ ನಿರೀಕ್ಷಿತ ಅಂತಿಮ ಚಿತ್ರ ಜನ ನಾಯಗನ್ ಮತ್ತೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವು ತಿಂಗಳುಗಳಿಂದ ವಿಳಂಬವಾಗಿದ್ದ ಈ ರಾಜಕೀಯ ಹಿನ್ನೆಲೆಯ ಚಿತ್ರವು ಇದೀಗ ಬಿಡುಗಡೆಯ ಹಂತಕ್ಕೆ ತಲುಪಿದ್ದು, ಇನ್ನೆರಡು ವಾರಗಳಲ್ಲಿ ತೆರೆಗೆ ಬರಬಹುದೆಂಬ ಸುಳಿವು ದೊರೆತಿದೆ.
ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥಾಪಕ ವೆಂಕಟ್ ಕೆ. ನಾರಾಯಣ ಅವರು ಇತ್ತೀಚೆಗೆ ಚೆನ್ನೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಚಿತ್ರದ ಪ್ರಗತಿ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಚಿತ್ರವು ಈಗ ಅಂತಿಮ ಸರ್ಟಿಫಿಕೆಟ್ ಹಂತದಲ್ಲಿದ್ದು, ಸೆನ್ಸಾರ್ ಮಂಡಳಿಯಾದ ಸಿಬಿಎಫ್‌ಸಿ ಜೊತೆ ಮಾತುಕತೆಗಳು ನಡೆಯುತ್ತಿವೆ. ಎಲ್ಲ ಪ್ರಕ್ರಿಯೆಗಳು ಸುಗಮವಾಗಿ ಪೂರ್ಣಗೊಂಡರೆ, ಮುಂದಿನ 14 ದಿನಗಳೊಳಗೆ ಚಿತ್ರವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ದೀರ್ಘಕಾಲದ ನಿರೀಕ್ಷೆಯ ನಂತರ ಈ ಚಿತ್ರ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದು ಈ ಸುದ್ದಿ ಅಭಿಮಾನಿಗಳಲ್ಲಿ ಹೊಸ ಚೈತನ್ಯ ಮೂಡಿಸಿದೆ.