ಶೃಂಗೇರಿ 'ಮರುಎಣಿಕೆ' ಸಮರಕ್ಕೆ ಸುಪ್ರೀಂ ಯಥಾಸ್ಥಿತಿ ಆದೇಶ; ಶಾಸಕನಾಗಿ ರಾಜೇಗೌಡ ಮುಂದುವರಿಕೆ, ಜೀವರಾಜ್‌ಗೆ ಗೇಟ್‌ಪಾಸ್
ನವದೆಹಲಿ/ಚಿಕ್ಕಮಗಳೂರು (ಮೇ 11): ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ (Postal Ballots) ಮರುಎಣಿಕೆ ಪ್ರಕ್ರಿಯೆ ಮತ್ತು ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಪ್ರಶ್ನಿಸಿ ಮಾಜಿ ಶಾಸಕ ಟಿ.ಡಿ. ರಾಜೇಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಹತ್ವದ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ 'ಯಥಾಸ್ಥಿತಿ' (Status Quo) ಕಾಯ್ದುಕೊಳ್ಳುವಂತೆ ಸೂಚಿಸಿರುವುದರಿಂದ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ ಒಂದೇ ವಾರದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುವಂತಾಗಿದೆ.
ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಇಂದು ವಿಚಾರಣೆ ನಡೆಯಿತು. ರಾಜೇಗೌಡರ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಪ್ರಬಲವಾದ ಮಂಡಿಸಿದರು. ಚುನಾವಣಾ ಆಯೋಗದ ನಡವಳಿಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಮರುಎಣಿಕೆಯ ಸಂದರ್ಭದಲ್ಲಿ ಪಾರದರ್ಶಕತೆ ಇರಲಿಲ್ಲ ಎಂದು ವಾದಿಸಿದರು.
ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿರುವುದರಿಂದ, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರೇ ಶಾಸಕರಾಗಿ ಮುಂದುವರಿಯಲಿದ್ದಾರೆ. ಇತ್ತೀಚೆಗಷ್ಟೇ ಅಂಚೆ ಮತಗಳ ಮರುಎಣಿಕೆಯಲ್ಲಿ ಜಯಗಳಿಸಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಡಿ.ಎನ್. ಜೀವರಾಜ್ ಅವರಿಗೆ ಇದು ಭಾರಿ ಹಿನ್ನಡೆಯಾಗಿದೆ.
ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೋಸ್ಟಲ್ ಬ್ಯಾಲೆಟ್ ವಿಚಾರವಾಗಿ ದೊಡ್ಡ ಮಟ್ಟದ ರಾಜಕೀಯ ಸಮರ ನಡೆಯುತ್ತಿದೆ. ಬಿಜೆಪಿ ಏಜೆಂಟ್‌ಗಳೇ ಮರುಎಣಿಕೆ ಬಗ್ಗೆ ಸಂಶಯ ವ್ಯಕ್ತಪಡಿಸಿರುವುದು ಒಂದೆಡೆಯಾದರೆ, ಈಗ ಸುಪ್ರೀಂ ಕೋರ್ಟ್ ನೀಡಿರುವ ತಡೆಯಾಜ್ಞೆ ರಾಜೇಗೌಡ ಬೆಂಬಲಿಗರಲ್ಲಿ ಹೊಸ ಉತ್ಸಾಹ ತುಂಬಿದೆ. ಮೇ 31ರಂದು ನಡೆಯಲಿರುವ ಮುಂದಿನ ವಿಚಾರಣೆಯು ಶೃಂಗೇರಿ ಕ್ಷೇತ್ರದ ಅಂತಿಮ ಶಾಸಕರು ಯಾರು ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಲಿದೆ.