Select Location
All Locations
State
Region
City / District
ಅಮೆರಿಕ ದಾಳಿ ಭೀತಿ: ಪಾಕಿಸ್ತಾನದ ವಾಯುನೆಲೆಯಲ್ಲಿ ಇರಾನ್ ಯುದ್ಧ ವಿಮಾನಗಳಿಗೆ ಆಶ್ರಯ?

ಅಮೆರಿಕ ದಾಳಿ ಭೀತಿ: ಪಾಕಿಸ್ತಾನದ ವಾಯುನೆಲೆಯಲ್ಲಿ ಇರಾನ್ ಯುದ್ಧ ವಿಮಾನಗಳಿಗೆ ಆಶ್ರಯ?

ಇಸ್ಲಾಮಾಬಾದ್/ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಪಾಕಿಸ್ತಾನವು ಇರಾನ್‌ನ ಮಿಲಿಟರಿ ವಿಮಾನಗಳಿಗೆ ತನ್ನ ವಾಯುನೆಲೆಯಲ್ಲಿ ರಹಸ್ಯವಾಗಿ ಆಶ್ರಯ ನೀಡಿದೆ ಎಂಬ ಸ್ಫೋಟಕ ವರದಿಯೊಂದು ಹೊರಬಿದ್ದಿದೆ. ಅಮೆರಿಕದ ಗುಪ್ತಚರ ಅಧಿಕಾರಿಗಳನ್ನು ಉಲ್ಲೇಖಿಸಿ ‘ಸಿಬಿಎಸ್ ನ್ಯೂಸ್’ ಈ ವರದಿಯನ್ನು ಪ್ರಕಟಿಸಿದೆ. ವರದಿಯ ಪ್ರಕಾರ, ಏಪ್ರಿಲ್ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ, ಇರಾನ್ ತನ್ನ ಪ್ರಮುಖ ಯುದ್ಧ ವಿಮಾನಗಳನ್ನು ಪಾಕಿಸ್ತಾನದ ರಾವಲ್ಪಿಂಡಿ ಸಮೀಪವಿರುವ 'ನೂರ್ ಖಾನ್' ವಾಯುನೆಲೆಗೆ ರವಾನಿಸಿದೆ. ಅಮೆರಿಕದ ಸಂಭಾವ್ಯ ವೈಮಾನಿಕ ದಾಳಿಯಿಂದ ತನ್ನ ರಕ್ಷಣಾ ಆಸ್ತಿಗಳನ್ನು ಉಳಿಸಿಕೊಳ್ಳಲು ಇರಾನ್ ಈ ತಂತ್ರ ರೂಪಿಸಿದೆ ಎನ್ನಲಾಗಿದೆ. ಈ ವಿಮಾನಗಳಲ್ಲಿ ಇರಾನ್ ವಾಯುಪಡೆಯ ಅತ್ಯಾಧುನಿಕ RC-130 ರಿಕನೈಸನ್ಸ್ (ಬೇಹುಗಾರಿಕೆ) ವಿಮಾನವೂ ಸೇರಿದೆ ಎಂದು ಮೂಲಗಳು ತಿಳಿಸಿವೆ.

ಅಫ್ಘಾನಿಸ್ತಾನಕ್ಕೂ ವಿಮಾನಗಳ ವರ್ಗಾವಣೆ? ಇರಾನ್ ಕೇವಲ ಪಾಕಿಸ್ತಾನ ಮಾತ್ರವಲ್ಲದೆ, ನೆರೆಯ ಅಫ್ಘಾನಿಸ್ತಾನಕ್ಕೂ ತನ್ನ ನಾಗರಿಕ ವಿಮಾನಗಳನ್ನು ಸ್ಥಳಾಂತರಿಸಿದೆ ಎಂದು ವರದಿಯಾಗಿದೆ. ಕಾಬೂಲ್ ಮತ್ತು ಹೆರಾತ್ ವಿಮಾನ ನಿಲ್ದಾಣಗಳಲ್ಲಿ ಇರಾನ್‌ನ 'ಮಹಾನ್ ಏರ್' ಸಂಸ್ಥೆಯ ವಿಮಾನಗಳು ಪತ್ತೆಯಾಗಿವೆ. ಆದರೆ, ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಈ ವರದಿಯನ್ನು ನಿರಾಕರಿಸಿದ್ದು, ಇರಾನ್ ವಿಮಾನಗಳಿಗೆ ಅಫ್ಘಾನಿಸ್ತಾನದಲ್ಲಿ ಆಶ್ರಯ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನದ ದ್ವಂದ್ವ ನೀತಿ ಒಂದೆಡೆ ಅಮೆರಿಕ ಮತ್ತು ಇರಾನ್ ನಡುವೆ ಸಂಧಾನಕಾರನಂತೆ ನಟಿಸುತ್ತಿರುವ ಪಾಕಿಸ್ತಾನ, ಇನ್ನೊಂದೆಡೆ ರಹಸ್ಯವಾಗಿ ಇರಾನ್‌ಗೆ ನೆರವು ನೀಡುತ್ತಿರುವುದು ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ. "ಈ ವರದಿ ನಿಜವಾಗಿದ್ದರೆ, ಸಂಧಾನಕಾರನಾಗಿ ಪಾಕಿಸ್ತಾನದ ಪಾತ್ರವನ್ನು ನಾವು ಮರುಪರಿಶೀಲಿಸಬೇಕಾಗುತ್ತದೆ" ಎಂದು ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಾಹಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Udayavani 47 minutes ago
Home Flash News