ರೈತರಿಗೆ ಒಳ್ಳೆ ಸುದ್ದಿ; 14 ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಮೋದಿ ಸಂಪುಟ ಒಪ್ಪಿಗೆ
2026-27ರ ಋತುವಿನ 14 ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (MSP) ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಬೆಳೆಗಾರರಿಗೆ ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ನವದೆಹಲಿ, ಮೇ 13: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ (Union Cabinet Meeting) ಇಂದು 4 ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. 2026-27ರ ಮಾರುಕಟ್ಟೆ ಋತುವಿನಲ್ಲಿ 14 ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳ ಗಣನೀಯ ಹೆಚ್ಚಳವನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಇದರಿಂದಾಗಿ ಸೂರ್ಯಕಾಂತಿ ಬೀಜವು ಕ್ವಿಂಟಾಲ್‌ಗೆ 622 ರೂ. ಹೆಚ್ಚಳವನ್ನು ಕಂಡಿದ್ದು, ಅದರ ಒಟ್ಟು MSP ಕ್ವಿಂಟಾಲ್‌ಗೆ 8,343 ರೂ. ತಲುಪಿದೆ.
ಸೂರ್ಯಕಾಂತಿ ಬೀಜಕ್ಕೆ ಪ್ರತಿ ಕ್ವಿಂಟಾಲ್‌ಗೆ 622 ರೂ. MSP ಹೆಚ್ಚಳವನ್ನು ಶಿಫಾರಸು ಮಾಡಲಾಗಿದೆ. ಹತ್ತಿಗೆ ಕ್ವಿಂಟಾಲ್‌ಗೆ 557 ಮತ್ತು ಎಳ್ಳಿಗೆ ಕ್ವಿಂಟಾಲ್‌ಗೆ 500 ರೂ.ಗಳ ಹೆಚ್ಚಳವನ್ನು ಶಿಫಾರಸು ಮಾಡಲಾಗಿದೆ. ಎ ದರ್ಜೆಯ ಭತ್ತಕ್ಕೆ ಕ್ವಿಂಟಾಲ್‌ಗೆ 2 ಸಾವಿರದ 461 ರೂ. ಕನಿಷ್ಠ ಬೆಂಬಲ ಬೆಲೆ, ಹೈಬ್ರಿಡ್ ಜೋಳಕ್ಕೆ ಕ್ವಿಂಟಾಲ್‌ಗೆ 4,023 ರೂ.ಗಳು, ಬಾಜ್ರಾಗೆ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್‌ಗೆ 2,900 ರೂ.ಗಳು ಮತ್ತು ತೊಗರಿ ಬೇಳೆಗೆ ಪ್ರತಿ ಕ್ವಿಂಟಾಲ್‌ಗೆ 8,450 ರೂ. ಬೆಂಬಲ ಬೆಲೆಯನ್ನು ಶಿಫಾರಸು ಮಾಡಲಾಗಿದೆ.