ಸಿದ್ದುಗೆ ಕಿವಿಮಾತು, ಡಿಕೆಶಿಗೆ HDK ಎಚ್ಚರಿಕೆ! ‘ನಾನು ಬರ್ತೀನಿ, ಸರಿಯಾದ ವ್ಯವಸ್ಥೆ ಮಾಡಿಕೊಡ್ತೀನಿ’ ಎಂದು ಜನರಿಗೆ ಭರವಸೆ! ಏನದು?
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಬಿ-ಖಾತೆ ಎ-ಖಾತೆ ಪರಿವರ್ತನೆ, ಮಂಡ್ಯದ ಕೈಗಾರಿಕೆ ಮತ್ತು ಸರ್ಕಾರದ ಕಾರ್ಯವೈಖರಿಯ ಬಗ್ಗೆ ಹೆಚ್‌ಡಿಕೆ ಹರಿಹಾಯ್ದಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ಧಮ್ಕಿ ನಮ್ಮ ಹತ್ತಿರ ನಡೆಯಲ್ಲ. ಯಾರ ಕಾಲದಲ್ಲಿ ಯಾರ ಕಾಲು ಕಟ್ಟುತ್ತೀರಿ ಎಂಬುದು ಚೆನ್ನಾಗಿ ಗೊತ್ತಿದೆ. ನೀವು ಹೇಳಿದ್ದಕ್ಕೆ ಡಿಸಿಗಳು ಸಹಿ ಹಾಕಿಕೊಂಡು ಕುಳಿತಿದ್ದಾರೆ. ನಮ್ಮ ನಂಬರ್‌ನಿಂದ ಫೋನ್ ಹೋದರೆ ಡಿಸಿಗಳು ಫೋನೇ ಎತ್ತುವುದಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.
ಮುಖ್ಯಮಂತ್ರಿಗಳಿಗೆ ನೇರ ಎಚ್ಚರಿಕೆ ನೀಡಿದ ಹೆಚ್‌ಡಿಕೆ, ಕೇವಲ ಕುರ್ಚಿ ಸಿಕ್ಕರೆ ಸಾಕು ಎಂದು ಇವರ ಮಾತು ಕೇಳಿಕೊಂಡು ರಿಯಲ್ ಎಸ್ಟೇಟ್ ದಲ್ಲಾಳಿ ಆಗಬೇಡಿ. ಕೊನೆಗಾಲದಲ್ಲಿ ಹೋಗುವಾಗ ಗೌರವಯುತವಾಗಿ ಹೆಸರು ತೆಗೆದುಕೊಂಡು ಹೋಗಿ. 2018ರಲ್ಲಿ ಹಲವು ಭಾಗ್ಯಗಳನ್ನು ನೀಡಿದರೂ ಜನ ನಿಮ್ಮನ್ನು 85 ಸೀಟಿಗೆ ಇಳಿಸಿದ್ದರು. ಇಂತಹ ಗ್ಯಾರಂಟಿಗಳನ್ನು ಕೊಟ್ಟು ಜನ ಈ ಬಾರಿ ಉಳಿಸುತ್ತಾರೆ ಎಂದು ಭಾವಿಸಬೇಡಿ ಎಂದರು.
ರಾಜ್ಯ ಸಚಿವ ಸಂಪುಟದ ಬಗ್ಗೆ ಮಾತನಾಡುತ್ತಾ, ಕ್ಯಾಬಿನೆಟ್ ಎನ್ನುವುದು ಕೇವಲ ಹೆಸರಿಗೆ ಮಾತ್ರ. ಅಲ್ಲಿ ಹೇಳುವವರು ಇಲ್ಲ, ಕೇಳುವವರು ಇಲ್ಲ. ಕ್ಯಾಬಿನೆಟ್ ಅಂದರೆ ಎಲ್ಲವನ್ನೂ ಹರಾಜು ಹಾಕುವ ಮನೆ ಎನ್ನಬಹುದೇ? ಎಂದು ಪ್ರಶ್ನಿಸಿದರು. ಸಾಯುವಾಗ ಯಾರೂ ಏನನ್ನೂ ಹೊತ್ತುಕೊಂಡು ಹೋಗುವುದಿಲ್ಲ, ಕೊನೆಗೆ ಉಳಿಯುವುದು 6 ಅಡಿ 3 ಅಡಿಯ ಜಾಗ ಮಾತ್ರ. ಏನೇ ಸಂಪಾದನೆ ಮಾಡಿದರೂ ಜನರಲ್ಲಿ ಒಳ್ಳೆಯ ಹೆಸರು ಮಾಡಿ ಎಂದು ಕಿವಿಮಾತು ಹೇಳಿದರು.
ನಾನು ರೈತರ ಪರವಾಗಿದ್ದೇನೆ, ಅದಕ್ಕೆ ನಿಮ್ಮ ಸರ್ಟಿಫಿಕೇಟ್ ಬೇಕಿಲ್ಲ. ಮಂಡ್ಯದಲ್ಲಿ ಕಾರ್ಖಾನೆ ತರಲು ಸಭೆ ಮಾಡಿದ್ದೇನೆ. 15 ಸಾವಿರ ಯುವಕರಿಗೆ ಉದ್ಯೋಗ ಸಿಗುವ 1000 ಕೋಟಿ ರೂಪಾಯಿ ಪ್ರಾಜೆಕ್ಟ್ ಫೌಂಡೇಶನ್ ಹಂತಕ್ಕೆ ಬಂದಿದೆ. ಆದರೆ ಜಾಗ ಕೇಳಿ ಒಂದು ವರ್ಷವಾದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಫಲವತ್ತಾದ ಭೂಮಿಯನ್ನಲ್ಲ, ಬರಡು ಭೂಮಿಯನ್ನು ಕೈಗಾರಿಕೆಗೆ ಕೇಳುತ್ತಿದ್ದೇನೆ ಎಂದು ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿದರು.