ಸ್ವಾಭಿಮಾನವೇ ಮುಖ್ಯ… ಟೆಸ್ಟ್ ನಿವೃತ್ತಿಗೆ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ
Virat Kohli: ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿ ಸರಿಯಾಗಿ ಒಂದು ವರ್ಷ ಕಳೆದಿದೆ. ಆದರೆ, ಅವರ ಆ ಹಠಾತ್ ನಿರ್ಧಾರದ ಹಿಂದಿನ ಅಸಲಿ ಕಾರಣ ಮಾತ್ರ ಇಂದಿಗೂ ನಿಗೂಢವಾಗಿತ್ತು. ಈಗ ಆರ್‌ಸಿಬಿ (RCB) ಪಾಡ್‌ಕಾಸ್ಟ್‌ನ ಹೊಸ ಸಂಚಿಕೆಯಲ್ಲಿ ಸ್ವತಃ ಕೊಹ್ಲಿ ಅವರೇ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಡುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಟೆಸ್ಟ್ ನಿವೃತ್ತಿಯ ಹಿಂದಿನ ಕಹಿ ಸತ್ಯಗಳು, ಪ್ರಸ್ತುತ ಮ್ಯಾನೇಜ್‌ಮೆಂಟ್ ವಿರುದ್ಧದ ಅಸಮಾಧಾನ ಮತ್ತು 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಕುರಿತು ಅವರು ಹಾಕಿರುವ ಕಠಿಣ ಷರತ್ತುಗಳ ಸಂಪೂರ್ಣ ವಿವರ ಇಲ್ಲಿದೆ.
ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ (Virat Kohli), ತಮ್ಮ ಹಠಾತ್ ನಿವೃತ್ತಿಯ ಹಿಂದಿನ ಅಸಲಿ ಕಾರಣವನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ. ಆರ್‌ಸಿಬಿ (RCB) ಪಾಡ್‌ಕಾಸ್ಟ್‌ನಲ್ಲಿ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಅವರೊಂದಿಗೆ ಮಾತನಾಡಿದ ಕೊಹ್ಲಿ, ತಂಡದ ಒಳಗಿನ ಗೊಂದಲಮಯ ವಾತಾವರಣ ಮತ್ತು ಗೌರವದ ಕೊರತೆಯೇ ತಮ್ಮ ನಿರ್ಧಾರಕ್ಕೆ ಮುಖ್ಯ ಕಾರಣ ಎಂದು ಪರೋಕ್ಷವಾಗಿ ಮ್ಯಾನೇಜ್‌ಮೆಂಟ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ನಂತರ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಹಠಾತ್ ವಿದಾಯ ಹೇಳಿದ್ದರು. ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಆ ದಿನಗಳನ್ನು ನೆನೆದ ಕೊಹ್ಲಿ, “ನನ್ನ ಮೇಲೆ ಮತ್ತು ನನ್ನ ಆಟದ ಮೇಲೆ ನಂಬಿಕೆ ಇಲ್ಲದ ವಾತಾವರಣದಲ್ಲಿ ನನಗೆ ಮುಂದುವರಿಯಲು ಸಾಧ್ಯವಿರಲಿಲ್ಲ. ನನ್ನ ಸಾಮರ್ಥ್ಯ ಮತ್ತು ತಂಡಕ್ಕೆ ನಾನೇನು ಎಂಬ ಮೌಲ್ಯವನ್ನು ಪದೇ ಪದೇ ಸಾಬೀತುಪಡಿಸಬೇಕಾದ ಪರಿಸ್ಥಿತಿ ಬಂದರೆ, ನಾನು ಆ ಜಾಗದಲ್ಲಿ ಇರಲು ಇಷ್ಟಪಡುವುದಿಲ್ಲ. ಟೆಸ್ಟ್ ಕ್ರಿಕೆಟ್ ಬಿಡುವುದು ಸುಲಭವಾಗಿರಲಿಲ್ಲ, ಆದರೆ ಆ ಸಮಯದಲ್ಲಿ ಆ ನಿರ್ಧಾರವೇ ಸರಿಯಾಗಿತ್ತು. ಏಕೆಂದರೆ ಎಲ್ಲಕ್ಕಿಂತ ಸ್ವಾಭಿಮಾನವೇ ಮುಖ್ಯ” ಎಂದು ನೇರವಾಗಿ ಹೇಳುವ ಮೂಲಕ ಗೌರವ ಸಿಗದ ಕಡೆ ಇರಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.