Select Location
All Locations
State
Region
City / District
ಕರಾವಳಿ, ಮಲೆನಾಡಿಗೆ ಯೆಲ್ಲೋ ಅಲರ್ಟ್; ಬೆಂಗಳೂರಿನಲ್ಲೂ ಇಂದು ಭಾರೀ ಮಳೆಯ ಎಚ್ಚರಿಕೆ

ಕರಾವಳಿ, ಮಲೆನಾಡಿಗೆ ಯೆಲ್ಲೋ ಅಲರ್ಟ್; ಬೆಂಗಳೂರಿನಲ್ಲೂ ಇಂದು ಭಾರೀ ಮಳೆಯ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ ಜೋರಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಇಂದು ಕೂಡ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಮುಂಗಾರು ಪೂರ್ವ ಮಾರುತಗಳ ತೀವ್ರತೆ ಹೆಚ್ಚಾಗಿರುವುದರಿಂದ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಬ್ಬರದ ಮಳೆಯಾಗಲಿದೆ. ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಮಳೆಯ ಜೊತೆಗೆ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಮರದ ಕೆಳಗೆ ಅಥವಾ ಹಳೆಯ ಕಟ್ಟಡಗಳ ಹತ್ತಿರ ಆಶ್ರಯ ಪಡೆಯದಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.

ಕರಾವಳಿ ಮಾತ್ರವಲ್ಲದೆ ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಬಾಗಲಕೋಟೆ ಭಾಗದಲ್ಲೂ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮುಂಜಾನೆಯಿಂದಲೇ ಆಕಾಶ ಮೋಡ ಕವಿದ ವಾತಾವರಣದಿಂದ ಕೂಡಿದೆ. ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ನಗರದ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ದಟ್ಟ ಸಾಧ್ಯತೆ ಇದೆ.


News First 7 hours ago
Home Flash News