Select Location
All Locations
State
Region
City / District
2034ರವರೆಗೆ ದೇಶದಲ್ಲಿ ಬಿಜೆಪಿ ಪ್ರಾಬಲ್ಯ ತಗ್ಗಲ್ಲ: ಸಮೀಕ್ಷಾ ತಜ್ಞ | 70ರ ದಶಕದ ಕಾಂಗ್ರೆಸ್‌ನ ವರ್ಚಸ್ಸು ಈಗ ಬಿಜೆಪಿಗೆ!

2034ರವರೆಗೆ ದೇಶದಲ್ಲಿ ಬಿಜೆಪಿ ಪ್ರಾಬಲ್ಯ ತಗ್ಗಲ್ಲ: ಸಮೀಕ್ಷಾ ತಜ್ಞ | 70ರ ದಶಕದ ಕಾಂಗ್ರೆಸ್‌ನ ವರ್ಚಸ್ಸು ಈಗ ಬಿಜೆಪಿಗೆ!

ಪಿಟಿಐ ನವದೆಹಲಿ (ಮೇ.22): 2014ರಲ್ಲಿ ದೇಶಾದ್ಯಂತ ಶುರುವಾದ ಬಿಜೆಪಿಯ ರಾಜಕೀಯ ಪ್ರಾಬಲ್ಯ ಸದ್ಯಕ್ಕಂತೂ ಕುಸಿಯುವುದಿಲ್ಲ. 2014ರಿಂದ ಆರಂಭವಾಗಿ ಕನಿಷ್ಠ 20 ವರ್ಷಗಳ ವರೆಗೆ (2034ರವರೆಗೆ) ಈ ಪ್ರಾಬಲ್ಯ ಮುಂದುವರಿಯಲಿದೆ ಎಂದು ಚುನಾವಣಾ ಸಮೀಕ್ಷೆ ತಜ್ಞ ಪ್ರದೀಪ್‌ ಗುಪ್ತಾ ಭವಿಷ್ಯ ನುಡಿದಿದ್ದಾರೆ ಚುನಾವಣಾ ಸರ್ವೆಗೆ ಹೆಸರುವಾಸಿಯಾಗಿರುವ ಆ್ಯಕ್ಸಿಸ್‌ ಮೈ ಇಂಡಿಯಾ ಸಂಸ್ಥೆ ಮುಖ್ಯಸ್ಥರೂ ಆಗಿರುವ ಪ್ರದೀಪ್‌ ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿ, ‘ಬಿಜೆಪಿ ಸರ್ಕಾರದ ಸಾಧನೆ ದುರ್ಬಲಗೊಳ್ಳುವವರೆಗೆ ಅದರ ಸ್ಥಾನವೂ ಭದ್ರವಾಗಿರಲಿದೆ. ರಾಜಕೀಯದಲ್ಲೂ ಮಿತಿ ಎಂಬುದು ಇದೆ. 

ಈ ಹಿಂದೆ ಕಾಂಗ್ರೆಸ್‌ ಪಕ್ಷ 1977ರ ವರೆಗೆ ದೇಶದಲ್ಲಿ ಅಧಿಕಾರದಲ್ಲಿತ್ತು. ಆ ಬಳಿಕ ನಾನಾ ಸಮಸ್ಯೆಗಳನ್ನು ಎದುರಿಸಲು ಆರಂಭಿಸಿತು. ಆ ದಿನಗಳಲ್ಲಿ ನಾವು ಪೊಲಿಟಿಕಲ್‌ ಜನರೇಷನ್‌ 20 ವರ್ಷಗಳ ಕಾಲ ಮುಂದುವರಿಯುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದೆವು. ಆ 20 ವರ್ಷಗಳ ಕಾಲಚಕ್ರ ಈಗಿನ ಕಾಲಕ್ಕೂ ಅನ್ವಯಿಸುತ್ತದೆ. ಹೀಗಾಗಿ ಬಿಜೆಪಿ ಇನ್ನೂ ಹಲವು ವರ್ಷಗಳ ಕಾಲ ಇದೇ ರೀತಿ ದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದನ್ನು ಮುಂದುವರಿಸಲಿದೆ’ ಎಂದರು. ಹೆಚ್ಚಿನ ಸಾಧನೆ ತೋರಬೇಕಿದೆ: ‘ಪ್ರತಿಪಕ್ಷಗಳು ಸಂಪೂರ್ಣವಾಗಿ ಬಿಜೆಪಿ ಸರ್ಕಾರದ ಸಾಧನೆಯನ್ನೇ ಅವಲಂಬಿಸಿಕೊಂಡು ರಾಜಕೀಯ ಮಾಡುತ್ತಿವೆ. ಭಾರೀ ಬಹುಮತದ ಗೆಲುವಿನ ಬಳಿಕ ಬಿಜೆಪಿ ಮೇಲಿನ ನಿರೀಕ್ಷೆಗಳೂ ಹೆಚ್ಚಾಗಿವೆ. ಹೀಗಾಗಿ ಎನ್‌ಡಿಎ ಮತ್ತು ಬಿಜೆಪಿ ಹೆಚ್ಚಿನ ಸಾಧನೆ ತೋರುವ ಅನಿವಾರ್ಯತೆ ಇದೆ. ಸರ್ಕಾರದ ಸಾಧನೆ ಉತ್ತಮವಾಗಿರುವವರೆಗೆ ಬಿಜೆಪಿ ಗೆಲ್ಲುತ್ತಲೇ ಹೋಗುತ್ತದೆ, ಪ್ರತಿಪಕ್ಷಗಳು ಸೋಲುತ್ತಲೇ ಹೋಗುತ್ತವೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

‘ಕಾಂಗ್ರೆಸ್‌ ಪಕ್ಷವು ಪರಂಪರಾಗತ ಸಮಸ್ಯೆಗಳ ಒತ್ತಡದಲ್ಲಿ ಸಿಲುಕಿದೆ. ಹಿಂದಿನ ದುರಾಡಳಿತದಿಂದಾಗಿ ಆ ಪಕ್ಷ ಚೇತರಿಸಿಕೊಳ್ಳಲು ಸುದೀರ್ಘ ಸಮಯ ತೆಗೆದುಕೊಳ್ಳಲಿದೆ. 2029ರ ಬಗ್ಗೆ ನಾವು ಮಾತನಾಡಿದರೂ ಕಾಂಗ್ರೆಸ್‌ ಅಧಿಕಾರದಿಂದ ಕೆಳಗಿಳಿದು ಆಗ 15 ವರ್ಷವಷ್ಟೇ ಆಗಿರುತ್ತದೆ. ನನ್ನ ಪ್ರಕಾರ ಆ ಪಕ್ಷಕ್ಕೆ ಇಡೀ ದೇಶವನ್ನು ಒಪ್ಪಿಸಲು ಮತ್ತೆ ಕನಿಷ್ಠ ಐದು ವರ್ಷವಾದರೂ ಬೇಕಾಗಬಹುದು’ ಎಂದರು ಗುಪ್ತಾ. ‘ರಾಜಕೀಯ ಪ್ರಾಬಲ್ಯವಿದ್ದಾಗ ಜನರ ನಿರೀಕ್ಷೆಗಳೂ ಸಾಮಾನ್ಯವಾಗಿ ಹೆಚ್ಚೇ ಇರುತ್ತವೆ. ನೀವು ತೀರಾ ಎತ್ತರಕ್ಕೆ ಹೋದ ನಂತರ ಕೆಳಗಿಳಿಯಲೇಬೇಕು. ಸದ್ಯ ಬಿಜೆಪಿ ಮೇಲಿನ ನಿರೀಕ್ಷೆಗಳು ತೀರಾ ಹೆಚ್ಚಿವೆ’ ಎಂದರು.


Asianet News 1 hour ago
Home Flash News