Gruhalakshmi: ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ, ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ನಿಂದ ಮಹತ್ವದ ಆದೇಶ
ಬೆಂಗಳೂರು (ಮೇ 21): ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಲಕ್ಷ್ಮಿ' ಸ್ಕೀಮ್ ಅನೇಕ ಹೆಣ್ಣು ಮಕ್ಕಳ ಪಾಲಿಗೆ ವರದಾನವಾಗಿದೆ. ಮಹತ್ವಾಕಾಂಕ್ಷೆಯ ಈ ಗೃಹಲಕ್ಷ್ಮಿ ಯೋಜನೆಯಡಿ ಬಾಕಿ ಉಳಿಸಿಕೊಂಡಿರುವ ಮಾಸಿಕ ಕಂತುಗಳ ಹಣವನ್ನ ತಕ್ಷಣವೇ ಬಿಡುಗಡೆ ಕುರಿತು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದ್ದು, ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಮಾಸಿಕ ಕಂತುಗಳ ಹಣವನ್ನು ತಕ್ಷಣವೇ ಬಿಡುಗಡೆ ಮಾಡಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಗುರುವಾರ ನೋಟಿಸ್ ಜಾರಿ ಮಾಡಿದೆ. ಬಾಕಿ ಹಣ ಬಿಡುಗಡೆಗೆ ಸರ್ಕಾರಕ್ಕೆ ನಿರ್ದೇಶನ ಕೋರುವಂತೆ ಬೆಂಗಳೂರಿನ ಕಮಲಾನಗರದ ನಿವಾಸಿ ಆರ್. ಗಂಗಾ ಹಾಗೂ ನಂದಿನಿ ಲೇಔಟ್‌ನ ಜಿ.ಡಿ. ಪವಿತ್ರಾ ಎಂಬುವರು ಹೈಕೋರ್ಟ್ ಮೊರೆಹೋಗಿದ್ರು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ಮತ್ತು ನ್ಯಾಯಮೂರ್ತಿ ಕೆ.ಮನ್ಮಧರಾವ್ ಅವರಿದ್ದ ನ್ಯಾಯಪೀಠ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿದೆ.
2024-2025ರ ಆರ್ಥಿಕ ವರ್ಷದಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳು ಫಲಾನುಭವಿಗಳಿಗೆ ತಲುಪಿಲ್ಲ. ಆಡಳಿತಾತ್ಮಕ ವರ್ಗಾವಣೆಯ ಕಾರಣದಿಂದ ಸುಮಾರು 5,000 ಕೋಟಿ ಸಾರ್ವಜನಿಕ ಹಣ ಲ್ಯಾಪ್ಸ್ ಆಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಈ ಕಂತುಗಳ ವಿಳಂಬ ಮತ್ತು ತಾಂತ್ರಿಕ ದೋಷಗಳ ಬಗ್ಗೆ ವಿವರಿಸಿದ್ದಾರೆ. ಹೀಗಾಗಿ ಬಾಕಿ ಇರುವ ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು ತಕ್ಷಣವೇ ಪಾವತಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.