ಇರಾನ್–ಅಮೆರಿಕ ಕದನ ವಿರಾಮ: ಒಪ್ಪಂದಕ್ಕೆ ಬರಲು ತೊಡಕಾಗಿರುವ 5 ಅಂಶಗಳಿವು
ಪಶ್ಚಿಮ ಏಷ್ಯಾ ಸಂಘರ್ಷ ಅಂತ್ಯಗೊಳಿಸುವ ಕದನ ವಿರಾಮ ಒಪ್ಪಂದ ಅಂತಿಮ ಹಂತದಲ್ಲಿದೆ ಎಂದು ಇರಾನ್ ಹಾಗೂ ಅಮೆರಿಕ ಸುಳಿವು ನೀಡಿದೆ. ಆದರೆ ಉಭಯ ರಾಷ್ಟ್ರಗಳು ಒಪ್ಪಂದದ ಪ್ರತಿಯನ್ನು ಇದುವರೆಗೂ ಬಿಡುಗಡೆಗೊಳಿಸಿಲ್ಲ. ಎರಡೂ ಪಕ್ಷಗಳು ಯಾವ ವಿಷಯದಲ್ಲಿ ಒಪ್ಪಂದಕ್ಕೆ ಬಂದಿವೆ? ಯಾವ ವಿಷಯದಲ್ಲಿ ಭಿನ್ನಾಭಿಪ್ರಾಯ ಮುಂದುವರಿದಿದೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಹಲವು ಸಂದರ್ಶನಗಳಲ್ಲಿ ಎರಡೂ ದೇಶಗಳ ನಾಯಕರು ಒಪ್ಪಂದ ಮೂಲ ವಿಷಯಗಳನ್ನು ಭಿನ್ನವಾಗಿ ಪ್ರಸ್ತುತಪಡಿಸಿದ್ದಾರೆ. ಅಣ್ವಸ್ತ್ರ ಯೋಜನೆ ಹಾಗೂ ಸಮೃದ್ಧೀಕರಿಸಿದ ಯುರೇನಿಯಂ ಹಸ್ತಾಂತರದ ಬಗ್ಗೆ ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಈ ಎರಡು ವಿಷಯಗಳೇ ಒಪ್ಪಂದ ಪ್ರಮುಖ ಅಂಶಗಳು. ಒಪ್ಪಂದಕ್ಕೆ ಬರಲು ವಿಳಂಬವಾಗುತ್ತಿರುವ ಪ್ರಮುಖ 5 ವಿಷಯಗಳು ಹಾಗೂ ಅವುಗಳ ಬಗ್ಗೆ ಉಭಯ ದೇಶಗಳ ಅಭಿಪ್ರಾಯ ಇಲ್ಲಿವೆ.
ತನ್ನ ಬಳಿ ಇರುವ ಸಮೃದ್ಧೀಕರಿಸಿದ ಯುರೇನಿಯಂ ಬಳಸಿ ಇರಾನ್ ಏನು ಮಾಡಬಹುದು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಅಂತರರಾಷ್ಟ್ರೀಯ ಅಣು ಇಂಧನ ಏಜೆನ್ಸಿ ಪ್ರಕಾರ, ಇರಾನ್ ಬಳಿ ಸುಮಾರು 970 ಪೌಂಡ್‌ಗಳಷ್ಟು ಶೇ 60 ಸಮೃದ್ಧೀಕರಿಸಿದ ಯುರೇನಿಯಂ ಹಾಗೂ 11 ಟನ್‌ಗಳಷ್ಟು ವಿವಿಧ ಹಂತಗಳಲ್ಲಿ ಸಮೃದ್ಧೀಕರಿಸಿದ ಯುರೇನಿಯಂ ದಾಸ್ತಾನು ಇದೆ. ಸಮೃದ್ಧೀಕರಿಸಿದ ಯುರೇನಿಯಂ ಒಪ್ಪಿಸುವ ಬಗ್ಗೆ ಇರಾನ್ ಹಾಗೂ ಅಮೆರಿಕ ನಡುವೆ ತಾತ್ವಿಕ ಒಪ್ಪಂದ ನಡೆದಿದೆ.
ಆದರೆ ಅದನ್ನು ಹೇಗೆ ಒಪ್ಪಿಸಬೇಕು ಎನ್ನುವುದರ ಬಗ್ಗೆ ಮಾತುಕತೆ ಜಾರಿಯಲ್ಲಿದೆ ಎಂದು ಅಮೆರಿಕ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಭವಿಷ್ಯದಲ್ಲಿ ಇರಾನ್, ಯುರೇನಿಯಂ ಸಮೃದ್ಧೀಕರಿಸುವ ಯೋಜನೆ ಮುಂದುವರಿಸಲಿದೆಯೇ ಎನ್ನುವುದು ಮತ್ತೊಂದು ಪ್ರಶ್ನೆಯಾಗಿದೆ. ಯುರೇನಿಯಂ ಸಮೃದ್ಧೀಕರಣಕ್ಕೆ ನಿಷೇಧ ಹೇರುವ ಬಗ್ಗೆ ಒಪ್ಪಂದದಲ್ಲಿ ಯಾವುದೇ ಪ್ರಸ್ತಾಪ ಇಲ್ಲ. ಭವಿಷ್ಯದ ಮಾತುಕತೆಯಲ್ಲಿ ಈ ವಿಷಯ ಇರಲಿದೆ ಎಂದು ಅಮೆರಿಕ ಅಧಿಕಾರಿ ತಿಳಿಸಿದ್ದಾರೆ. ಆದರೆ ಹಿಂದಿನ ಮಾತುಕತೆಯಲ್ಲಿ, ಕನಿಷ್ಠ 20 ವರ್ಷ ಯುರೇನಿಯಂ ಸಮೃದ್ಧೀಕರಣವನ್ನು ಕೈಬಿಡಬೇಕು ಎಂದು ಅಮೆರಿಕ ಇರಾನ್‌ಗೆ ಆಗ್ರಹಿಸಿತ್ತು.