Select Location
All Locations
State
Region
City / District
ವಿಧಾನ ಪರಿಷತ್, ರಾಜ್ಯಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟ: ಇಲ್ಲಿದೆ ವೇಳಾಪಟ್ಟಿ

ವಿಧಾನ ಪರಿಷತ್, ರಾಜ್ಯಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟ: ಇಲ್ಲಿದೆ ವೇಳಾಪಟ್ಟಿ

ಬೆಂಗಳೂರು: ರಾಜ್ಯಸಭೆಯ ನಾಲ್ಕು ಹಾಗೂ ವಿಧಾನ ಪರಿಷತ್‌‌ನ ಏಳು ಸ್ಥಾನಗಳಿಗೆ ನಡೆಸುವ ದ್ವೈವಾರ್ಷಿಕ ಚುನಾವಣೆ ಸಂಬಂಧ ವಿಧಾನಸಭೆ ಸಚಿವಾಲಯವು ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ‌ಹಾಗೂ ವಿಧಾನ ಪರಿಷತ್‌‌ಗೆ ಚುನಾಯಿತರಾಗಿರುವ ಸದಸ್ಯರು ಇದೇ ತಿಂಗಳು ನಿವೃತ್ತರಾಗಲಿದ್ದಾರೆ. ಹೀಗಾಗಿ ಚುನಾವಣೆ ನಡೆಯಲಿದ್ದು, ಸಚಿವಾಲಯವು ಹೇಳಿಕೆ ಬಿಡುಗಡೆ ಮಾಡಿದೆ. ರಾಜ್ಯಸಭೆ ಹಾಗೂ ಪರಿಷತ್‌‌ ಸ್ಥಾನಗಳಿಗೆ 2026ರ ಜೂನ್‌ 18ರಂದು ಮತದಾನ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಜೂನ್ 8 ಕೊನೇ ದಿನವಾಗಿದ್ದು, ಉಮೇದುವಾರಿಕೆ ಹಿಂಪಡೆಯಲು ಜೂನ್‌ 11ರವರೆಗೆ ಕಾಲಾವಕಾಶ ನೀಡಲಾಗಿದೆ. ಕರ್ನಾಟಕ ವಿಧಾನ ಪರಿಷತ್‌‌ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಚುನಾವಣಾಧಿಕಾರಿಯಾಗಿ ಮತ್ತು ವಿಧಾನಸಭೆಯ ನಿರ್ದೇಶಕ ಬಿ.ಎಸ್‌. ಮಹಾಲಿಂಗೇಶ್‌ ಸಹಾಯಕ ಚುನಾವಣಾಧಿಕಾರಿಯಾಗಿ ಎರಡೂ ಚುನಾವಣೆ ವೇಳೆ ಕರ್ತವ್ಯ ನಿರ್ವಹಿಸಲಿದ್ದಾರೆ.

ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬೆಳಗಾವಿ ಬಿಜೆಪಿ ಮುಖಂಡ ಈರಣ್ಣ ಕಡಾಡಿ, ದಕ್ಷಿಣ ಕನ್ನಡ ಬಿಜೆಪಿ ಮುಖಂಡ ಕೆ. ನಾರಾಯಣ ಅವರ ಅವಧಿ ಜೂನ್ 25 ರಂದು ಕೊನೆಗೊಳ್ಳಲಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಚುನಾಯಿತರಾಗಿರುವ ಗೋವಿಂದ ರಾಜು (ಜೆಡಿಎಸ್‌), ನಸೀರ್ ಅಹಮದ್ (ಕಾಂಗ್ರೆಸ್‌), ಎನ್. ನಾಗರಾಜು/ಎಂ.ಟಿ.ಬಿ ನಾಗರಾಜು (ಬಿಜೆಪಿ), ಪ್ರತಾಪ ಸಿಂಹ ನಾಯಕ್ ಕೆ (ಬಿಜೆಪಿ), ತಿಪ್ಪಣ್ಣಪ್ಪ ಕಮಕನೂರ (ಕಾಂಗ್ರೆಸ್‌), ಸುನಿಲ್ ವಲ್ಯಾಪುರೆ (ಬಿಜೆಪಿ) ಹಾಗೂ ಬಿ.ಕೆ. ಹರಿಪ್ರಸಾದ್ (ಕಾಂಗ್ರೆಸ್‌) ಅವರ ಅವಧಿಯು ಜೂನ್ 30ರಂದು ಕೊನೆಗೊಳ್ಳಲಿದೆ.


Prajavani 55 minutes ago
Home Flash News