ಕರ್ನಾಟಕ ಸಿಎಂ ಬದಲಿಸಲು ಜನಾಕ್ರೋಶ ಕಾರಣ: ಮೋದಿ
ಸೂರತ್: ಹೆಚ್ಚುತ್ತಿರುವ ಸಾರ್ವಜನಿಕರ ಆಕ್ರೋಶದ ಕಾರಣದಿಂದಲೇ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ತನ್ನ ಮುಖ್ಯಮಂತ್ರಿಯನ್ನು ಬದಲಾಯಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದ್ದಾರೆ. ಸಿದ್ದರಾಮಯ್ಯ ಬದಲಿಗೆ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮೋದಿ ಅವರ ಈ ಹೇಳಿಕೆ ಹೊರಬಿದ್ದಿದೆ. ಗುಜರಾತ್‌ನ ಸೂರತ್‌ನಲ್ಲಿ 18,000 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕರ್ನಾಟಕದ ಹಾಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕದ ಜನರಲ್ಲಿ ತೀವ್ರ ಆಕ್ರೋಶವಿದೆ. ಅದೇ ಕಾರಣಕ್ಕಾಗಿ ಕಾಂಗ್ರೆಸ್ ಮುಖ್ಯಮಂತ್ರಿಯನ್ನು ಬದಲಾಯಿಸಬೇಕಾಗಿ ಬಂದಿದೆ’ ಎಂದರು.
ಮುಂದುವರಿದು, ಆ ಪಕ್ಷ ಅಧಿಕಾರದಲ್ಲಿರುವ ಇತರ ರಾಜ್ಯಗಳಲ್ಲೂ ಅಲ್ಲಿನ ಜನರಿಂದ ತೀವ್ರ ವಿರೋಧವನ್ನು ಕಾಂಗ್ರೆಸ್ ಎದುರಿಸುತ್ತಿದೆ ಎಂದು ಮೋದಿ ಪ್ರತಿಪಾದಿಸಿದರು. ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಾಗೂ ಹರ್ಯಾಣ ಮತ್ತು ಪಂಜಾಬ್‌ನಲ್ಲಿ ಎದುರಾದ ಚುನಾವಣಾ ಹಿನ್ನಡೆಗಳನ್ನು ಉದಾಹರಣೆಯಾಗಿ ನೀಡಿದ ಮೋದಿ, ಜನರು ಕಾಂಗ್ರೆಸ್ ಪಕ್ಷದ ಆಡಳಿತದಿಂದ ಬೇಸತ್ತಿದ್ದಾರೆ ಎಂದೂ ಹೇಳಿದರು.