TN Politics: ನಾಲ್ವರು ಮಾಜಿ ಸಚಿವರು TVKಗೆ ಸೇರ್ಪಡೆ: AIADMKಗೆ ಮತ್ತೆ ಹಿನ್ನಡೆ
ಚೆನ್ನೈ: ತೀವ್ರ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಎಐಎಡಿಎಂಕೆ ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಪಕ್ಷದ ನಾಲ್ವರು ಮಾಜಿ ಸಚಿವರು ಶನಿವಾರ ಆಡಳಿತಾರೂಢ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಎಐಎಡಿಎಂಕೆ ಮುಖಂಡರಾದ ಉಡುಮಲೈ ಕೆ. ರಾಧಾಕೃಷ್ಣನ್, ಎಂ. ಸಿ. ಸಂಪತ್, ಕಡಂಬೂರ್ ಸಿ. ರಾಜು ಮತ್ತು ಎನ್. ಆರ್. ಶಿವಪತಿ ಅವರು ಟಿವಿಕೆಗೆ ಸೇರಿದ್ದಾರೆ. ಚೆನ್ನೈನ ಟಿವಿಕೆ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿವಿಕೆ ಪ್ರಧಾನ ಕಾರ್ಯದರ್ಶಿ ಅವರ ಸಮ್ಮುಖದಲ್ಲಿ ಎಐಎಡಿಎಂಕೆ ನಾಯಕರು ಪಕ್ಷಕ್ಕೆ ಸೇರಿದ್ದಾರೆ. ಉಡುಮಲೈ ರಾಧಾಕೃಷ್ಣನ್ ಅವರು ಉಡುಮಲಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಅದೇ ರೀತಿ ಸಂಪತ್ ಕಡಲೂರು ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಕಡಂಬೂರ್ ರಾಜು ಕೂಡ ಕೋವಿಲ್ಪಟ್ಟಿ ಕ್ಷೇತ್ರದಲ್ಲಿ ಸೋಲನುಭವಿಸಿದ್ದರು. ಮೇ 29ರಂದು 300ಕ್ಕೂ ಹೆಚ್ಚು ಎಐಎಡಿಎಂಕೆ ಸದಸ್ಯರು ಟಿವಿಕೆ ಸೇರಿದ್ದರು. ಹೀಗೆ ಪಕ್ಷಾಂತರಗೊಂಡವರಲ್ಲಿ ಎಐಎಡಿಎಂಕೆ ಮಾಜಿ ಸಚಿವರಾದ ವೆಲ್ಲಮಂಡಿ ನಟರಾಜನ್, ಆನಂದನ್ ಮತ್ತು ಮಾಜಿ ಶಾಸಕರಾದ ನಟರಾಜ್ ಮತ್ತು ಸಾಧನ್ ಪ್ರಭಾಕರ್ ಇದ್ದಾರೆ. ಕೆ.ಎ. ಸೆಂಗೊಟ್ಟೈಯನ್ ಅವರು ಎಐಎಡಿಎಂಕೆ ತೊರೆದು ಟಿವಿಕೆ ಸೇರಿದ ಮೊದಲ ಪ್ರಮುಖ ನಾಯಕರಾಗಿದ್ದರು. ಅವರು ಚುನಾವಣೆಗೂ ಮುನ್ನವೇ ವಿಜಯ್ ಅವರ ಬೆನ್ನಿಗೆ ನಿಂತಿದ್ದರು.