40 ವರ್ಷ ಹಳೆಯ ರೈಲ್ವೇ ಟಿಕೆಟ್ ಬುಕಿಂಗ್ ವ್ಯವಸ್ಥೆಗೆ ಗುಡ್‌ಬೈ; ಆಗಸ್ಟ್‌ನಿಂದ ಹೊಸ ಸಿಸ್ಟಮ್ ಜಾರಿ!
ಭಾರತೀಯ ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆ ವ್ಯವಸ್ಥೆಯಲ್ಲಿ ದಶಕಗಳಲ್ಲೇ ಅತಿ ದೊಡ್ಡ ಬದಲಾವಣೆಯಾಗುತ್ತಿದೆ. 1986 ರಿಂದ ಜಾರಿಯಲ್ಲಿದ್ದ ಹಳೆಯ ವ್ಯವಸ್ಥೆಯನ್ನು ಬದಲಿಸಿ, ಅತ್ಯಾಧುನಿಕ ತಂತ್ರಜ್ಞಾನದ ಹೊಸ ‘ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್’ (PRS) ಅನ್ನು ಈ ಆಗಸ್ಟ್‌ನಿಂದ ಜಾರಿಗೆ ತರಲು ರೈಲ್ವೆ ಇಲಾಖೆ ಸಜ್ಜಾಗಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ರೈಲ್ ಭವನದಲ್ಲಿ ಈ ನೂತನ ವ್ಯವಸ್ಥೆಯ ಪ್ರಗತಿಯನ್ನು ಪರಿಶೀಲಿಸಿದರು. ಈ ಮಹತ್ವದ ಸಭೆಯಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಮತ್ತು ರವನೀತ್ ಸಿಂಗ್ ಬಿಟ್ಟು ಅವರು ಉಪಸ್ಥಿತರಿದ್ದರು. ವ್ಯವಸ್ಥೆ ಬದಲಾಗುವ ಸಮಯದಲ್ಲಿ ಪ್ರಯಾಣಿಕರಿಗೆ ಯಾವುದೇ ರೀತಿಯ ತಾಂತ್ರಿಕ ಅಡಚಣೆ ಅಥವಾ ಟಿಕೆಟ್ ಬುಕಿಂಗ್‌ನಲ್ಲಿ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.