ಸಿಕ್ಕ 78 ಕೋಟಿ ರೂ. ಲಾಟರಿ ಹಣವನ್ನು ಸ್ನೇಹಿತರ ಜತೆ ಹಂಚಿಕೊಂಡ ಸೆಕ್ಯೂರಿಟಿ ಗಾರ್ಡ್
ದುಬೈನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ತಯಾಬ್ ಖಾನ್, 78 ಕೋಟಿ ರೂ. ಲಾಟರಿ ಗೆದ್ದು ಕೋಟ್ಯಧಿಪತಿಯಾಗಿದ್ದಾರೆ. ಈ ಹಣವನ್ನು ತಮ್ಮ ಐವರು ಸ್ನೇಹಿತರೊಂದಿಗೆ ಹಂಚಿಕೊಂಡ ಅವರು, ಈಗ ತಮ್ಮದೇ ಆದ ವ್ಯವಹಾರ ಆರಂಭಿಸುವ ಕನಸು ಕಂಡಿದ್ದಾರೆ. ಕುಟುಂಬಕ್ಕೆ ನೆರವು ಮತ್ತು ಉದ್ಯಮಿಯಾಗುವ ಇವರ ನಿರ್ಧಾರ ಹಲವರಿಗೆ ಸ್ಫೂರ್ತಿದಾಯಕ.
ದುಬೈ, ಜೂನ್ 10: ದುಬೈನ ಅಬುಧಾಬಿಯ ಯಾವುದೋ ಒಂದು ಅಪಾರ್ಟ್‌ಮೆಂಟ್‌ನ ಗೇಟಿನ ಬಳಿ ನಿಂತು ಬರುವ-ಹೋಗುವ ದಾರಿಹೋಕರನ್ನು ನಗುಮೊಗದಿಂದ ಸ್ವಾಗತಿಸುತ್ತಿದ್ದ 26 ವರ್ಷದ ನೇಪಾಳಿ ಯುವಕ ತಯಾಬ್ ಖಾನ್‌ನ ಬದುಕು ಇಂದು ಜಗತ್ತೇ ತಿರುಗಿ ನೋಡುವಂತೆ ಬದಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕೇವಲ ಭದ್ರತಾ ಸಿಬ್ಬಂದಿಯಾಗಿ (ಸೆಕ್ಯೂರಿಟಿ ಗಾರ್ಡ್) ದುಡಿಯುತ್ತಿದ್ದ ತಯಾಬ್, ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ಕೋಟಿ ಕೋಟಿ ಲಾಟರಿ(Lottery) ಹಣ ಕೈಗೆ ಬಂದಾಗ ಆ ಯುವಕ ಮೊದಲು ಮಾಡಿದ್ದೇನು ಗೊತ್ತಾ? ಇಲ್ಲಿದೆ ಮಾಹಿತಿ.
ಆ ಒಂದು ಇ-ಮೇಲ್ ತಂದ ನಡುಕ ಈದ್ ಅಲ್-ಅಧಾ ಹಬ್ಬದ ರಜಾದಿನಗಳ ಆ ರಾತ್ರಿ, ಎಲ್ಲರೂ ಹಬ್ಬದ ಸಂಭ್ರಮದಲ್ಲಿದ್ದರೆ ತಯಾಬ್ ಮಾತ್ರ ಎಂದಿನಂತೆ ತನ್ನ ನೈಟ್ ಡ್ಯೂಟಿಯಲ್ಲಿದ್ದ. ಟಿವಿಯಲ್ಲಿ ಲಾಟರಿ ಡ್ರಾ ನೇರಪ್ರಸಾರವಾಗುತ್ತಿದ್ದರೂ, ತನಗೇನು ಸಿಗುತ್ತದೆ ಎಂಬ ಉದಾಸೀನತೆಯಿಂದ ಆತ ಕೆಲಸದಲ್ಲೇ ಮಗ್ನನಾಗಿದ್ದ. ಅಷ್ಟರಲ್ಲಿ ಮೊಬೈಲ್‌ಗೆ ಒಂದು ಇ-ಮೇಲ್ ಬಂತು. ಸಾಮಾನ್ಯವಾಗಿ ಸಣ್ಣಪುಟ್ಟ ಬಹುಮಾನ ಬಂದಾಗ ಬರುವ ಇ-ಮೇಲ್ ಇರಬಹುದು ಎಂದುಕೊಂಡು ತಯಾಬ್ ಅದನ್ನು ತೆರೆದಾಗ ಅವರ ಕಣ್ಣುಗಳೇ ಮಂಜಾದವು. ಅಲ್ಲಿ ಬರೆದಿದ್ದ ಮೊತ್ತ ಬರೋಬ್ಬರಿ 30 ಮಿಲಿಯನ್ ದಿರ್ಹಮ್ಸ್ (ಸುಮಾರು 78 ಕೋಟಿಗೂ ಅಧಿಕ ರೂಪಾಯಿಗಳು!) ಆ ಮೊತ್ತವನ್ನು ನೋಡಿದಾಗ ನನ್ನ ಕೈಕಾಲುಗಳು ನಡುಗಲು ಆರಂಭಿಸಿದವು. ತಾನು ಎಚ್ಚರವಿದ್ದೇನೆಯೇ ಅಥವಾ ಕನಸು ಕಾಣುತ್ತಿದ್ದೇನೋ ನನಗೇ ಅರ್ಥವಾಗಲಿಲ್ಲ ಎಂದು ಆ ಕ್ಷಣದ ರೋಮಾಂಚನವನ್ನು ತಯಾಬ್ ನೆನಪಿಸಿಕೊಳ್ಳುತ್ತಾರೆ.