ಟಿಎಂಸಿಗೆ ಮತ್ತೊಂದು ಆಘಾತ: ರಾಜ್ಯಸಭಾ ಸದಸ್ಯತ್ವಕ್ಕೆ ಸುಶ್ಮಿತಾ ದೇವ್ ರಾಜೀನಾಮೆ
ನವದೆಹಲಿ: ಸಂಸದೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ನಾಯಕಿ ಸುಶ್ಮಿತಾ ದೇವ್ ರಾಜ್ಯಸಭಾ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಇದರರೊಂದಿಗೆ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಹಾಗೂ ಬಂಡಾಯದ ಬಿಸಿ ತಾರಕಕ್ಕೇರಿದೆ. ಅಲ್ಲದೆ ವಾರದೊಳಗೆ ಇಬ್ಬರು ಸಂಸದರು ರಾಜೀನಾಮೆ ನೀಡಿದಂತಾಗಿದೆ. ಇದೇ ವಾರದಲ್ಲಿ ಸುಖೇಂದು ಶೇಖರ್ ರಾಯ್ ಅವರು ರಾಜೀನಾಮೆ ನೀಡಿದ್ದರು. ಕೆಲವು ವರ್ಷಗಳ ಹಿಂದೆಯಷ್ಟೇ ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ್ದ ಸುಶ್ಮಿತಾ, ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.
ಟಿಎಂಸಿ ತೊರೆದಿರುವ ಸುಶ್ಮಿತಾ ದೇವ್, ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಅಸ್ಸಾ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಬಿಕ್ಕಟ್ಟು ತಲೆದೋರಿದೆ. ಟಿಎಂಸಿಯ ಒಟ್ಟು 80 ಶಾಸಕರಲ್ಲಿ 58 ಶಾಸಕರು ಬಂಡಾಯ ಎದ್ದು, ಟಿಎಂಸಿ ಶಾಸಕಾಂಗ ಪಕ್ಷದಿಂದ ಬೇರ್ಪಟ್ಟು, ಉಚ್ಚಾಟಿತ ಶಾಸಕ ರುತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಮಾನ್ಯತೆ ಪಡೆದಿದ್ದರು. ಟಿಎಂಸಿ ಸಂಸದೀಯ ಘಟಕದಲ್ಲಿ ಬಿರುಕು ಮೂಡಿದ್ದು, ಪಕ್ಷದ ಹಲವಾರು ಸಂಸದರು ಬಂಡಾಯ ಬಣವನ್ನು ರಚಿಸಿ ಆಡಳಿತಾರೂಢ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.