ಬಾಂಗ್ಲಾ ವಲಸಿಗರಿಗೆ ಗುರುತಿನ ಚೀಟಿ ಸೃಷ್ಟಿಸಲು ಕಾಂಗ್ರೆಸ್ ಸರ್ಕಾರ ಯತ್ನ: HDK
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಆರ್‌ಐ) ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ, ಚುನಾವಣಾ ಆಯೋಗದ ನಿಯಮಾವಳಿಗಳನ್ನು ಗಾಳಿಗೆ ತೂರಿ, ಈ ಇಡೀ ಪ್ರಕ್ರಿಯೆಯ ಮೇಲೆ ತನ್ನ ಪ್ರಭಾವ ಬೀರುತ್ತಿದೆ ಎಂದು ಅವರು ದೂರಿದ್ದಾರೆ.
ರಾಮನಗರ ಮತ್ತು ಕುಣಿಗಲ್‌ನಲ್ಲಿರುವ ಸಮುದಾಯ ಭವನದಲ್ಲಿ ನಡೆಯುತ್ತಿರುವ ಎಸ್‌ಆರ್‌ಐ ಪ್ರಕ್ರಿಯೆಯ ವಿಡಿಯೊ ರೆಕಾರ್ಡಿಂಗ್‌ಗಳನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಅವರು, ರಾಜ್ಯ ಸರ್ಕಾರ ಚುನಾವಣಾ ಪ್ರಕ್ರಿಯೆಯನ್ನು 'ಹೈಜಾಕ್' ಮಾಡುತ್ತಿದೆ ಎಂದು ಆಪಾದಿಸಿದ್ದಾರೆ.
ರಾಮನಗರದ ಸಮುದಾಯ ಭವನವೊಂದರಲ್ಲಿ ನಿರ್ದಿಷ್ಟ ಸಮುದಾಯದ ಅಕ್ರಮ ವಲಸಿಗರಿಗೆ ಗುರುತಿನ ಚೀಟಿ ಸೃಷ್ಟಿಸಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ. ಸುಮಾರು 8,000 ದಿಂದ 10,000 ಬಾಂಗ್ಲಾ ಪ್ರಜೆಗಳು ಗುಂಪು ಗುಂಪಾಗಿ ಬರುತ್ತಿದ್ದು, ಬಿಎಲ್‌ಒಗಳು ಅವರಿಂದ ಅರ್ಜಿಗಳನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗ ಸೂಕ್ತ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಕಾಂಗ್ರೆಸ್ ಸರ್ಕಾರದ ರಕ್ಷಣೆಯಲ್ಲಿ 25 ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳು ಕರ್ನಾಟಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಆರೋಪಿಸಿದ ಎಚ್‌ಡಿಕೆ, ಈ ಗಂಭೀರ ವಿಷಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೂ ತರುತ್ತೇನೆ ಎಂದು ಎಚ್ಚರಿಸಿದ್ದಾರೆ.
ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮಾಡಬೇಕು ಎಂಬ ನಿಯಮವನ್ನು ಗಾಳಿಗೆ ತೂರಿ, ನಕಲಿ ಮತದಾರರನ್ನು ಒಂದೇ ಸ್ಥಳದಲ್ಲಿ ಸೇರಿಸಿ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಗೆ ಸಾರ್ವಜನಿಕರು ಸಹಕರಿಸಬೇಕು ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನವಿಯನ್ನು ಟೀಕಿಸಿದ ಕುಮಾರಸ್ವಾಮಿ, ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟರೆ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಿಗುವುದಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರ ಜನರಲ್ಲಿ ಭಯ ಹುಟ್ಟಿಸುತ್ತಿದೆ ಎಂದೂ ಅವರು ಹೇಳಿದ್ದಾರೆ.