Select Location
All Locations
State
Region
City / District
ಪ್ರಧಾನಿ ನಿವಾಸದಲ್ಲಿ ಬಿಜೆಪಿ ಉನ್ನತ ನಾಯಕರ ಸಭೆ: ಸಂಪುಟ ಪುನಾರಚನೆ ಕೌತುಕ

ಪ್ರಧಾನಿ ನಿವಾಸದಲ್ಲಿ ಬಿಜೆಪಿ ಉನ್ನತ ನಾಯಕರ ಸಭೆ: ಸಂಪುಟ ಪುನಾರಚನೆ ಕೌತುಕ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದಲ್ಲಿ ಬುಧವಾರ ಬಿಜೆಪಿ ಉನ್ನತ ನಾಯಕರ ಮಹತ್ವದ ಸಭೆ ಜರುಗಿದೆ. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ನಿತಿನ್ ನವೀನ್ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಭಾಗಿಯಾಗಿದ್ದರು. ಸಭೆಯಲ್ಲಿ ಯಾವ ವಿಚಾರದ ಬಗ್ಗೆ ಚರ್ಚೆಯಾಯಿತು ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಜುಲೈ 20 ರಿಂದ ಆಗಸ್ಟ್ 13 ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ನಿಗದಿಯಾಗಿದ್ದು, ಸದನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎನ್ನಲಾಗಿದೆ.

ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷಗಳನ್ನು ಜಂಟಿಯಾಗಿ ಎದುರಿಸುವ ನಿಟ್ಟಿನಲ್ಲಿ ಮೈತ್ರಿಕೂಟದ ಒಗ್ಗಟ್ಟು ಪ್ರದರ್ಶನಕ್ಕಾಗಿ ಜುಲೈ 21ರಂದು ಎನ್‌ಡಿಎ ಕೂಟದ ಪಕ್ಷಗಳ ಸಭೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ಉನ್ನತ ಮಟ್ಟದ ಸಂಘಟನಾತ್ಮಕ ಬದಲಾವಣೆಗಳು ಹಾಗೂ ಕೇಂದ್ರ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನಾರಚನೆ ಕುರಿತಾದ ವದಂತಿಗಳ ನಡುವೆಯೇ ಈ ಸಭೆ ನಡೆದಿರುವುದು ಭಾರಿ ಕುತೂಹಲ ಮೂಡಿಸಿದೆ.


Prajavani 1 hour ago
Home Flash News