FIFA: ಮೆಸ್ಸಿ ಮ್ಯಾಜಿಕ್, ಇಂಗ್ಲೆಂಡ್‌ಗೆ ಆಘಾತ: ಅರ್ಜೆಂಟೀನಾ ಸತತ ಎರಡನೇ ಬಾರಿ ಫೈನಲ್‌ಗೆ!
ಅಟ್ಲಾಂಟಾ: ನಾಯಕ ಲಿಯೋನೆಲ್ ಮೆಸ್ಸಿಯ ಅದ್ಭುತ ಆಟದ ಸಂಘಟನೆ, ಎನ್ಜೊ ಫೆರ್ನಾಂಡೆಸ್ ಅವರ ಸಮಬಲದ ಗೋಲು ಹಾಗೂ ಹೆಚ್ಚುವರಿ ವೇಳೆಯಲ್ಲಿ ಲೌಟಾರೊ ಮಾರ್ಟಿನೆಸ್ ಬಾರಿಸಿದ ನಿರ್ಣಾಯಕ ಗೋಲಿನ ನೆರವಿನಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾ 2-1 ಗೋಲುಗಳ ಅಂತರದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ 2026ರ ಫಿಫಾ ವಿಶ್ವಕಪ್ ಫೈನಲ್‌ಗೆ ಭರ್ಜರಿಯಾಗಿ ಪ್ರವೇಶಿಸಿದೆ. ರವಿವಾರ ನ್ಯೂಯಾರ್ಕ್-ನ್ಯೂಜೆರ್ಸಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಅರ್ಜೆಂಟೀನಾ ಯುರೋಪಿಯನ್ ಚಾಂಪಿಯನ್ ಸ್ಪೇನ್ ತಂಡವನ್ನು ಎದುರಿಸಲಿದೆ. ಇದರೊಂದಿಗೆ ಸತತ ಎರಡನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಕನಸನ್ನು ಲಿಯೋನೆಲ್ ಮೆಸ್ಸಿ ಪಡೆ ಜೀವಂತವಾಗಿರಿಸಿಕೊಂಡಿದೆ. ಇಂಗ್ಲೆಂಡ್‌ಗೆ ಭರವಸೆ ನೀಡಿದ ಗೋರ್ಡನ್ ಪಂದ್ಯದ ಆರಂಭದಿಂದಲೇ ಇಂಗ್ಲೆಂಡ್ ತಂಡ ಮೆಸ್ಸಿಯನ್ನು ಕಟ್ಟಿಹಾಕುವ ತಂತ್ರವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿತು.
ಡೆಕ್ಲನ್ ರೈಸ್, ಜೂಡ್ ಬೆಲಿಂಗ್ಹ್ಯಾಮ್ ಹಾಗೂ ಎಲಿಯಟ್ ಆಂಡರ್ಸನ್ ಅವರ ಶಿಸ್ತಿನ ಆಟದಿಂದ ಅರ್ಜೆಂಟೀನಾದ ದಾಳಿಗೆ ಕಡಿವಾಣ ಬಿದ್ದಿತ್ತು.55ನೇ ನಿಮಿಷದಲ್ಲಿ ಮೋರ್ಗನ್ ರೋಜರ್ಸ್ ನೀಡಿದ ನಿಖರ ಕ್ರಾಸ್ ಅನ್ನು ಆಂಥೋನಿ ಗೋರ್ಡನ್ ಗೋಲಾಗಿ ಪರಿವರ್ತಿಸಿ ಇಂಗ್ಲೆಂಡ್‌ಗೆ 1-0 ಮುನ್ನಡೆ ತಂದುಕೊಟ್ಟರು. 1966ರ ಬಳಿಕ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸುವ ಕನಸು ಇಂಗ್ಲೆಂಡ್ ಅಭಿಮಾನಿಗಳಲ್ಲಿ ಚಿಗುರೊಡೆಯಿತು. ಮತ್ತೆ ಮೆರೆದ ವಿಶ್ವ ಚಾಂಪಿಯನ್‌ಗಳು ಹಿನ್ನಡೆಯಲ್ಲಿದ್ದರೂ ಅರ್ಜೆಂಟೀನಾ ಆತಂಕಕ್ಕೆ ಒಳಗಾಗಲಿಲ್ಲ. ಮೆಸ್ಸಿ ಗೋಲು ಬಾರಿಸದಿದ್ದರೂ ಮಧ್ಯಭಾಗದಿಂದ ಆಟವನ್ನು ನಿಯಂತ್ರಿಸುತ್ತಾ ಸಹ ಆಟಗಾರರಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದ್ದರು.87ನೇ ನಿಮಿಷದಲ್ಲಿ ಎನ್ಜೊ ಫೆರ್ನಾಂಡೆಸ್ ಬಾಕ್ಸ್ ಹೊರಗಿನಿಂದ ಸಿಡಿಸಿದ ಪ್ರಬಲ ಶಾಟ್ ಗೋಲ್‌ಪೋಸ್ಟ್ ಸೇರಿ ಅರ್ಜೆಂಟೀನಾಗೆ ಸಮಬಲ ತಂದುಕೊಟ್ಟಿತು. ಆ ಗೋಲಿನೊಂದಿಗೆ ಪಂದ್ಯ ಸಂಪೂರ್ಣವಾಗಿ ಅರ್ಜೆಂಟೀನಾದತ್ತ ತಿರುಗಿತು. ಹೆಚ್ಚುವರಿ ಸಮಯದ 92ನೇ ನಿಮಿಷದಲ್ಲಿ ಮೆಸ್ಸಿಯ ಚತುರ ಆಟದ ನಿರ್ಮಾಣದ ಬಳಿಕ ಲೌಟಾರೊ ಮಾರ್ಟಿನೆಸ್ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಗೆಲುವಿನ ಗೋಲು ದಾಖಲಿಸಿದರು.
ಈ ಗೋಲಿನೊಂದಿಗೆ ಅರ್ಜೆಂಟೀನಾ 2-1 ಅಂತರದ ರೋಚಕ ಜಯ ಸಾಧಿಸಿತು. ಗೋಲು ಇಲ್ಲದಿದ್ದರೂ ಮೆಸ್ಸಿಯೇ ಕೇಂದ್ರಬಿಂದು 39 ವರ್ಷದ ಲಿಯೋನೆಲ್ ಮೆಸ್ಸಿ ಈ ಪಂದ್ಯದಲ್ಲಿ ಗೋಲು ದಾಖಲಿಸದಿದ್ದರೂ ಎರಡು ಗೋಲುಗಳಿಗೆ ನೆರವಾದ ಮೂಲಕ ಪಂದ್ಯದ ಪ್ರಮುಖ ಆಟಗಾರರಾಗಿ ಹೊರಹೊಮ್ಮಿದರು. ಹಿಂದೆ ಇದ್ದಂತೆ ವೈಯಕ್ತಿಕ ಗೋಲುಗಳ ಮೇಲೆ ಅವಲಂಬಿತರಾಗದೇ, ಆಟದ ವೇಗವನ್ನು ನಿಯಂತ್ರಿಸುವ ಮೂಲಕ ತಂಡದ ಯಶಸ್ಸಿಗೆ ಕಾರಣರಾದರು. ಜೂಲಿಯನ್ ಅಲ್ವಾರೆಸ್ ನಿರಂತರ ಒತ್ತಡ ತಂದರೆ, ರೊಡ್ರಿಗೊ ಡಿ ಪಾಲ್ ಮಧ್ಯಭಾಗದಲ್ಲಿ ಪ್ರಭಾವ ಬೀರಿದರು. ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ ಕೂಡ ದಾಳಿಯ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದರು. ಇತಿಹಾಸದ ಅಂಚಿನಲ್ಲಿ ಅರ್ಜೆಂಟೀನಾ ನಾಕೌಟ್ ಹಂತದಲ್ಲಿ ಕೇಪ್ ವರ್ಡೆ, ಈಜಿಪ್ಟ್ ಹಾಗೂ ಸ್ವಿಟ್ಜರ್ಲೆಂಡ್ ವಿರುದ್ಧ ಕಠಿನ ಪರೀಕ್ಷೆ ಎದುರಿಸಿದ್ದರೂ ಪ್ರತಿಯೊಂದು ಬಾರಿ ಪುಟಿದೇಳಿದ ಅರ್ಜೆಂಟೀನಾ ಇದೀಗ ಸತತ ಎರಡನೇ ವಿಶ್ವಕಪ್ ಪ್ರಶಸ್ತಿಯಿಂದ ಇತಿಹಾಸ ನಿರ್ಮಿಸುವ ಅವಕಾಶದತ್ತ ಹೆಜ್ಜೆ ಇಟ್ಟಿದೆ. 1962ರಲ್ಲಿ ಬ್ರೆಜಿಲ್ ಬಳಿಕ ಯಾವುದೇ ರಾಷ್ಟ್ರವೂ ವಿಶ್ವಕಪ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿಲ್ಲ. ಆ ಸಾಧನೆ ಮಾಡುವ ಕನಸಿನೊಂದಿಗೆ ಅರ್ಜೆಂಟೀನಾ ಇದೀಗ ಅಜೇಯ ಸ್ಪೇನ್ ವಿರುದ್ಧದ ಫೈನಲ್ ಹಣಾಹಣಿಗೆ ಸಜ್ಜಾಗಿದೆ. 39ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಮೆಸ್ಸಿ, ಇದೀಗ ತಮ್ಮ ವೃತ್ತಿಜೀವನದ ಮೊದಲ ಸ್ಪರ್ಧಾತ್ಮಕ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಸೆಣಸಲಿದ್ದಾರೆ.