Select Location
All Locations
State
Region
City / District
ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಎಸ್‌ಐಆರ್‌ ಅವಧಿ ವಿಸ್ತರಿಸಿದ ಚುನಾವಣಾ ಆಯೋಗ

ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಎಸ್‌ಐಆರ್‌ ಅವಧಿ ವಿಸ್ತರಿಸಿದ ಚುನಾವಣಾ ಆಯೋಗ

ನವದೆಹಲಿ: ಭಾರತೀಯ ಚುನಾವಣಾ ಆಯೋಗವು (ECI) ಬುಧವಾರ (ಜು. 15) ದೆಹಲಿ ಸೇರಿದಂತೆ ಪಂಜಾಬ್, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಅವಧಿಯನ್ನು ವಿಸ್ತರಿಸಿ ಆದೇಶಿಸಿದೆ. ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಭಾರತೀಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಸಂದೀಪ್ ಕುಮಾರ್ ಪತ್ರದ ಎಸ್‌ಐಆರ್ ಚಟುವಟಿಕೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಕಳುಹಿಸಿಕೊಟ್ಟಿದ್ದಾರೆ. ಇಲ್ಲಿದೆ ವಿವರ.. ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಗಸ್ಟ್ 5 ರಂದು ಪ್ರಕಟಗೊಳ್ಳಬೇಕಿದ್ದ ಕರಡು ಮತದಾರರ ಪಟ್ಟಿಯನ್ನು ಇದೀಗ ಆಗಸ್ಟ್ 17 ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದೆ. ಅಂತೆಯೇ, ಜುಲೈ 29 ರವರೆಗೆ ನಿಗದಿಯಾಗಿದ್ದ ಮನೆ-ಮನೆ ಭೇಟಿ ಪ್ರಕ್ರಿಯೆಯು ಈಗ ಆಗಸ್ಟ್ 8 ರವರೆಗೆ ಮುಂದುವರಿಯಲಿದೆ. ಅಂತಿಮ ಪರಿಷ್ಕೃತ ಪಟ್ಟಿಯು ಅಕ್ಟೋಬರ್ 19 ರಂದು ಪ್ರಕಟಗೊಳ್ಳಲಿದೆ.

ಕರ್ನಾಟಕ: ರಾಜ್ಯದಲ್ಲಿ ಬೂತ್ ಮಟ್ಟದ ಅಧಿಕಾರಿಗಳ (BLO) ಮನೆ-ಮನೆ ಭೇಟಿ ಪ್ರಕ್ರಿಯೆಯು ಜುಲೈ 29ರ ಬದಲಾಗಿ ಆಗಸ್ಟ್ 8 ರವರೆಗೆ ಮುಂದುವರಿಯಲಿದೆ. ಕರಡು ಮತದಾರರ ಪಟ್ಟಿಯು ಆಗಸ್ಟ್ 5ರ ಬದಲಿಗೆ ಆಗಸ್ಟ್ 17 ರಂದು ಪ್ರಕಟವಾಗಲಿದೆ. ಇನ್ನು ಅಕ್ಟೋಬರ್ 7 ರಂದು ಬಿಡುಗಡೆಯಾಗಬೇಕಿದ್ದ ಅಂತಿಮ ಮತದಾರರ ಪಟ್ಟಿಯು ಪರಿಷ್ಕೃತ ವೇಳಾಪಟ್ಟಿ ಅಕ್ಟೋಬರ್ 19 ರಂದು ಪ್ರಕಟಗೊಳ್ಳಲಿದೆ. ಪಂಜಾಬ್: ಬಿಎಲ್‌ಒಗಳ ಮನೆ-ಮನೆ ಭೇಟಿ ಪ್ರಕ್ರಿಯೆಯು ಜುಲೈ 24 ರ ಬದಲಾಗಿ ಆಗಸ್ಟ್ 3 ರವರೆಗೆ ಮುಂದುವರಿಯಲಿದೆ. ಕರಡು ಮತದಾರರ ಪಟ್ಟಿಯನ್ನು ಜುಲೈ 31 ರ ಬದಲಿಗೆ ಆಗಸ್ಟ್ 13 ರಂದು ಪ್ರಕಟಿಸಲಾಗುವುದು. ಅಂತಿಮ ಮತದಾರರ ಪಟ್ಟಿಯು ಅಕ್ಟೋಬರ್ 10 ರ ಬದಲಾಗಿ ಅಕ್ಟೋಬರ್ 12 ರಂದು ಹೊರಬರಲಿದೆ. ತೆಲಂಗಾಣ: ರಾಜ್ಯದಲ್ಲಿ ಕರಡು ಮತದಾರರ ಪಟ್ಟಿಯು ಆಗಸ್ಟ್ 10 ರಂದು ಹಾಗೂ ಅಂತಿಮ ಮತದಾರರ ಪಟ್ಟಿಯು ಅಕ್ಟೋಬರ್ 12 ರಂದು ಪ್ರಕಟಗೊಳ್ಳಲಿದೆ.

ಇತರ ರಾಜ್ಯಗಳ ವಿವರ: ಇದಕ್ಕೂ ಮುನ್ನ ಮಂಗಳವಾರ (ಜು. 14) ಚುನಾವಣಾ ಆಯೋಗವು ಹರಿಯಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ವಿಶೇಷ ಪರಿಷ್ಕರಣೆ (SIR) ವೇಳಾಪಟ್ಟಿಯನ್ನು ಸಹ ವಿಸ್ತರಿಸಿತ್ತು. ಮೇ 14 ರಂದು ಆರಂಭಿಸಲಾದ ಎಸ್‌ಐಆರ್ (SIR) ನ 3ನೇ ಹಂತದ ಭಾಗವಾಗಿ ದೆಹಲಿ, ಹರಿಯಾಣ, ಆಂಧ್ರಪ್ರದೇಶ ಸೇರಿದಂತೆ ಈ ಮೂರು ರಾಜ್ಯಗಳು ಒಳಪಡುತ್ತವೆ. ಈ 3ನೇ ಹಂತವು ಪೂರ್ಣಗೊಂಡ ನಂತರ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೊರತುಪಡಿಸಿ ಇಡೀ ದೇಶಾದ್ಯಂತ ಎಸ್‌ಐಆರ್ ಪ್ರಕ್ರಿಯೆಯು ಪೂರ್ಣಗೊಂಡಂತಾಗುತ್ತದೆ. ವಿವಿಧ ಕಾರಣಗಳಿಂದಾಗಿ, ಇದರ ಹಿಂದಿನ ಹಂತಗಳ ವೇಳಾಪಟ್ಟಿಯಲ್ಲೂ ಚುನಾವಣಾ ಆಯೋಗವು ಹಲವು ಬದಲಾವಣೆಗಳನ್ನು ಮಾಡಿತ್ತು ಎಂಬುದು ಉಲ್ಲೇಖನೀಯ.


Udayavani 48 minutes ago
Home Flash News