ಜೆನ್ ಜಿಗಳಿಗೆ ಸಂಘ ಬೆಂಬಲ
ಹೊಸದಿಲ್ಲಿ,: ನೀಟ್ ಅಕ್ರಮ ಹಾಗೂ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿ ದಿಲ್ಲಿಯಲ್ಲಿ ಸುಮಾರು 37 ದಿನಗಳ ಕಾಲ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಬೆಂಬಲ ಸೂಚಿಸಿದ್ದು, "ಜೆನ್ ಜಿ ಆಕ್ರೋಶ ನ್ಯಾಯಸಮ್ಮತವಾಗಿದೆ' ಎಂದು ಹೇಳಿದ್ದಾರೆ. ಮುಂಬಯಿಯಲ್ಲಿ ಗುರುವಾರ ನಡೆದ ಜೆನ್ ಜಿ ಯುವಕರು ಹಾಗೂ ಜೆನ್ ಅಲ್ಫಾ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜೆನ್ ಜಿ ಯುವಕರು ಪ್ರತಿಭಟನೆ ಮಾಡ ಬಾರ ದೆಂದು ನಾನು ಹೇಳುವುದಿಲ್ಲ.
ಪ್ರಜಾ ಪ್ರಭುತ್ವದಲ್ಲಿ ಪ್ರತಿಭಟನೆ ಎನ್ನು ವುದು ಮಾತುಕತೆಗೆ ಇರುವಂಥ ಒಂದು ದಾರಿ. ಆದರೆ ಅದನ್ನು ಯಾವ ರೀತಿ ಮಾಡಬೇಕು ಹಾಗೂ ಹೇಗೆ ಮಾಡಬೇಕು ಎಂಬ ಬಗ್ಗೆ ಅದರದೇ ಆದ ನೀತಿ, ರೀತಿಗಳಿವೆ. ಆದರೆ ಜೆನ್ ಜಿಗಳು ಪ್ರತಿಭಟನೆ ಮಾಡು ತ್ತಿದ್ದಾರೆಂದ ಮಾತ್ರಕ್ಕೆ ಅವರಿಗೆ ದೇಶದ್ರೋಹಿಗಳ ಪಟ್ಟವನ್ನು ಕಟ್ಟಬಾರದು ಎಂದು ಹೇಳಿದ್ದಾರೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯಲಿಲ್ಲ ಎಂಬ ಕಾರಣಕ್ಕೆ ಹಲವು ಸಲ ಜನ ಪ್ರತಿಭಟನೆಗೆ ಇಳಿಯಬಹುದು. ಇದರ ಹಿಂದಿನ ಉದ್ದೇಶ ಒಗ್ಗಟ್ಟು ಆಗಿರಬೇಕೇ ಹೊರತು ವಿಭಜನೆ ಸೃಷ್ಟಿ ಮಾಡುವುದಾಗಿರಬಾರದು. ನನಗೆ ಜೆನ್ ಜಿ ಸಮುದಾಯದ ಪ್ರಾಮಾಣಿಕತೆಯಲ್ಲಿ ನಂಬಿಕೆಯಿದೆ ಹಾಗೂ ಅವರ ಸದ್ಯದ ಆಕ್ರೋಶ ನ್ಯಾಯಸಮಮ್ಮತವೂ ಆಗಿದೆ ಎಂದರು.
ಹಿಂದಿನ ಮಕ್ಕಳು ಯಾವುದೇ ಪ್ರಶ್ನೆಗಳನ್ನೇ ಕೇಳುತ್ತಿರಲಿಲ್ಲ. ಹಿರಿಯರು ಹೇಳಿದ್ದನ್ನೇ ಸುಮ್ಮನೆ ಒಪ್ಪಿಕೊಂಡು ಬಿಡುತ್ತಿದ್ದರು. ಆದರೆ ಈಗಿನ ಜೆನ್ ಜಿ ಮತ್ತು ಜೆನ್ ಅಲ್ಫಾ ಮಕ್ಕಳು ಪ್ರಶ್ನೆ ಕೇಳುತ್ತಾರೆ ಹಾಗೂ ಅದಕ್ಕೆ ಸರಿಯಾದ, ಸೂಕ್ತ ಉತ್ತರವನ್ನು ಬಯಸುತ್ತಾರೆ ಎಂದು ಭಾಗವತ್ ಹೇಳಿದ್ದಾರೆ. ನೀತಿ, ನಿಯಮಮಗಳ ಆವಶ್ಯಕ. ಆದರೆ ನಮ್ಮ ನಡವಳಿಕೆಗಳು ಬದಲಾದಾಗ ಮಾತ್ರ ಅವು ಯಶಸ್ವಿಯಾಗುತ್ತವೆ (ಪಾಲನೆ ಆಗುತ್ತವೆ). ದೇಶದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಎದ್ದಿರುವ ಪ್ರಶ್ನೆಗಳು ಸರಿಯಾಗಿವೆ. ಅದನ್ನು ಸರಿದಾರಿಗೆ ತರುವ ಕೆಲಸ ಎಲ್ಲರೂ ಸೇರಿ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಹರಡುವ ಅನಾವಶ್ಯಕ ವಿಷಯಗಳು ಹಾಗೂ ಅವು ಸಮಾಜದ ಮೇಲೆ ಬೀರುವ ಪರಿಣಾಮದ ಬಗ್ಗೆ ಪ್ರತಿಕ್ರಿಯಿಸಿದ ಭಾಗವತ್, ಇದನ್ನು ನಿಲ್ಲಿಸಬೇಕೆಂದರೆ ಜನ ಸ್ವಶಿಸ್ತನ್ನು ರೂಢಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣ ನಿಷೇಧ ಮಾಡಿಬಿಡುವುದು ಎಲ್ಲದಕ್ಕೂ ಪರಿಹಾರವಲ್ಲ ಎಂದು ಹೇಳಿದರು.