Select Location
All Locations
State
Region
City / District
2021–2026ರಲ್ಲಿ ಮೋದಿ ವಿದೇಶ ಪ್ರವಾಸಕ್ಕೆ ಎಷ್ಟು ಖರ್ಚು ಆಗಿದೆ?: ಇಲ್ಲಿದೆ ವಿವರ

2021–2026ರಲ್ಲಿ ಮೋದಿ ವಿದೇಶ ಪ್ರವಾಸಕ್ಕೆ ಎಷ್ಟು ಖರ್ಚು ಆಗಿದೆ?: ಇಲ್ಲಿದೆ ವಿವರ

ನವದೆಹಲಿ: ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅವರ ವಿದೇಶ ಪ್ರವಾಸಗಳ ಚರ್ಚೆ ಹಾಗೂ ಅದಕ್ಕೆ ತಗಲುವ ಖರ್ಚುಗಳ ಬಗ್ಗೆ ಪರ-ವಿರೋಧ ಚರ್ಚೆಗಳು ಸದಾ ಸಕ್ರಿಯವಾಗಿವೆ. ಇತ್ತೀಚೆಗೆ ರಾಜ್ಯಸಭೆಯಲ್ಲಿ ಸಂಸದರು ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ನೀಡಿರುವ ಅಧಿಕೃತ ದತ್ತಾಂಶ ಪ್ರಕಾರ, 2025ರ ಸಾಲಿನಲ್ಲಿ ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸಗಳಿಗೆ ಬರೋಬ್ಬರಿ ₹187 ಕೋಟಿ ವೆಚ್ಚವಾಗಿದೆ.

ರಾಜ್ಯಸಭೆಯಲ್ಲಿ ಸಂಜಯ್ ಸಿಂಗ್ ಮತ್ತು ವಿ. ಶಿವದಾಸನ್ ಅವರು ಕೇಳಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ ಅವರು ನೀಡಿರುವ ಉತ್ತರದ ಮಾಹಿತಿ ಇಲ್ಲಿವೆ. 2025ರಲ್ಲಿ ₹187 ಕೋಟಿ ವೆಚ್ಚ: 2025ರಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ ಮತ್ತು ಜಪಾನ್ ಸೇರಿದಂತೆ 23 ದೇಶಗಳ ಪ್ರವಾಸಕ್ಕೆ ಒಟ್ಟು ₹187 ಕೋಟಿ ವೆಚ್ಚವಾಗಿದೆ.

2026ರ ವೆಚ್ಚ (ಈವರೆಗೆ): 2026ರಲ್ಲಿ ಈವರೆಗೆ ಕೈಗೊಂಡಿರುವ ವಿದೇಶ ಪ್ರವಾಸಗಳಿಗೆ ಒಟ್ಟು ₹74.58 ಕೋಟಿ ವೆಚ್ಚವಾಗಿದೆ. ಇದರಲ್ಲಿ ಜುಲೈನಲ್ಲಿ ಕೈಗೊಂಡಿರುವ ಇಂಡೋನೇಷ್ಯಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸಗಳ ವೆಚ್ಚವೂ ಸೇರಿವೆ. 2021-2024ರವರೆಗಿನ ವೆಚ್ಚ: ಜುಲೈ 2025 ರಲ್ಲಿ , ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರವಾಗಿ ಸರ್ಕಾರವು ಪ್ರಧಾನಮಂತ್ರಿಯವರ ವಿದೇಶ ಪ್ರವಾಸಗಳ ದತ್ತಾಂಶವನ್ನು ಹಂಚಿಕೊಂಡಿತ್ತು , ಅದರ ಪ್ರಕಾರ 2021 ರಿಂದ 2024 ರವರೆಗಿನ ಅವರ ವಿದೇಶ ಪ್ರವಾಸಗಳಿಗೆ ಸಂಬಂಧಿಸಿದ ಒಟ್ಟು ವೆಚ್ಚ ಸುಮಾರು ₹295 ಕೋಟಿ ಆಗಿತ್ತು. ಇದರಲ್ಲಿ 2021ರಲ್ಲಿ ಬಾಂಗ್ಲಾದೇಶ (₹1.01 ಕೋಟಿ), ಅಮೆರಿಕ (₹19.63 ಕೋಟಿ), ಇಟಲಿ (₹6.90 ಕೋಟಿ) ಮತ್ತು ಯುಕೆ (₹8.57 ಕೋಟಿ) ಭೇಟಿ ಸೇರಿವೆ ಎಂದು ಅಂಕಿಅಂಶಗಳು ತಿಳಿಸಿವೆ.

2025ರಲ್ಲಿ ಮೋದಿ ಭೇಟಿ ನೀಡಿದ ಇತರ ದೇಶಗಳಲ್ಲಿ ಮಾರಿಷಸ್ , ಥಾಯ್ಲೆಂಡ್‌, ಶ್ರೀಲಂಕಾ, ಸೈಪ್ರಸ್, ಕೆನಡಾ, ಕ್ರೊವೇಷಿಯಾ, ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ನಮೀಬಿಯಾ, ಮಾಲ್ಡೀವ್ಸ್, ಜಪಾನ್, ಭೂತಾನ್, ದಕ್ಷಿಣ ಆಫ್ರಿಕಾ, ಜೋರ್ಡಾನ್, ಒಮಾನ್‌ ಮತ್ತು ಇಥಿಯೋಪಿಯಾ ಸೇರಿವೆ. ಹೂಡಿಕೆ ಮತ್ತು ಒಪ್ಪಂದಗಳು: ಜುಲೈ 2021ರಿಂದ ಈವರೆಗೆ 316 ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಏಪ್ರಿಲ್ 2021 ರಿಂದ 2025ರ ಡಿಸೆಂಬರ್ ಅವಧಿಯಲ್ಲಿ 381.8 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಹರಿದುಬಂದಿದೆ. ದ್ವಿಪಕ್ಷೀಯ ಬಾಂಧವ್ಯ ವೃದ್ಧಿ: ವಿದೇಶಾಂಗ ಸಚಿವಾಲಯದ ಪ್ರಕಾರ, ಪ್ರಧಾನಿಯವರ ಉನ್ನತ ಮಟ್ಟದ ಭೇಟಿಗಳು ಜಾಗತಿಕ ಮಟ್ಟದಲ್ಲಿ ಭಾರತದ ಬಾಂಧವ್ಯವನ್ನು ವೃದ್ಧಿಸಲು ಸಹಕಾರಿಯಾಗಿವೆ. ತಂತ್ರಜ್ಞಾನ, ನಾವೀನ್ಯತೆ, ವ್ಯಾಪಾರ, ಹೂಡಿಕೆ, ರಕ್ಷಣೆ ಮತ್ತು ಇಂಧನ ವಲಯಗಳಲ್ಲಿ ಸಹಕಾರ ಹೆಚ್ಚಿದೆ.

ಜುಲೈ 2021 ರಿಂದ ಈವರೆಗೆ ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಒಟ್ಟು 316 ತಿಳಿವಳಿಕೆ ಪತ್ರಗಳಿಗೆ ಸಹಿ ಹಾಕಲಾಗಿದೆ. ಏಪ್ರಿಲ್ 2021 ರಿಂದ ಡಿಸೆಂಬರ್ 2025ರ ಅವಧಿಯಲ್ಲಿ ದೇಶಕ್ಕೆ ಬಂದ ಒಟ್ಟು ಎಫ್‌ಡಿಐ ಪ್ರಮಾಣ 381.8 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಮಾರ್ಗರಿಟಾ ಅವರ 35 ಪುಟಗಳ ಪ್ರತಿಕ್ರಿಯೆಯಲ್ಲಿ, ಈ ಭೇಟಿಗಳ ಸಮಯದಲ್ಲಿ ಸಹಿ ಮಾಡಲಾದ ಒಪ್ಪಂದಗಳ ದೇಶವಾರು ವಿವರಗಳನ್ನು ಪ್ರತ್ಯೇಕ ಅನುಬಂಧದಲ್ಲಿ ಉಲ್ಲೇಖಿಸಿದ್ದಾರೆ.


Prajavani 1 hour ago
Home Flash News