Select Location
All Locations
State
Region
City / District
‘ವಂದೇ ಮಾತರಂ’ ನಿಲ್ಲಿಸುವ ಪಾಪವನ್ನು ದೇಶ ಕ್ಷಮಿಸುವುದಿಲ್ಲ: ಸೋನಿಯಾ ವಿರುದ್ಧ ಶಾ ಕಿಡಿ

‘ವಂದೇ ಮಾತರಂ’ ನಿಲ್ಲಿಸುವ ಪಾಪವನ್ನು ದೇಶ ಕ್ಷಮಿಸುವುದಿಲ್ಲ: ಸೋನಿಯಾ ವಿರುದ್ಧ ಶಾ ಕಿಡಿ

ಕೋಟಾ/ಚಿತ್ತೋರ್‌ಗಢ: ಕಾಂಗ್ರೆಸ್‌ ಪಕ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಅರ್ಧಕ್ಕೆ ನಿಲ್ಲಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ವಂದೇ ಮಾತರಂ’ ಗೀತೆಯನ್ನು ನಿಲ್ಲಿಸುವ ಪ್ರಯತ್ನದ ಈ ಪಾಪವನ್ನು ದೇಶದ ಜನ ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ. ಚಿತ್ತೋರ್‌ಗಢದಲ್ಲಿ ರವಿವಾರ ‘ಅಟಲ್‌ ಗೌರವ ಸ್ಮೃತಿ ಸಮಾರಂಭ’ದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡುತ್ತಿದ್ದ ವೇಳೆ ಅದನ್ನು ನಿಲ್ಲಿಸುವಂತೆ ಸೋನಿಯಾ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಿಗೆ ಸೂಚಿಸಿದ್ದಾರೆ ಎಂದು ಆರೋಪಿಸಿದರು.

‘ಕಾಂಗ್ರೆಸ್‌ನ ನಾಚಿಕೆಗೇಡಿತನವನ್ನು ನೋಡಿ. ಕಾಂಗ್ರೆಸ್‌ ಕಚೇರಿಯಲ್ಲಿ ವಂದೇ ಮಾತರಂ ಹಾಡಲಾಗುತ್ತಿತ್ತು. ಗೀತೆ ಹಾಡುತ್ತಿದ್ದ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷರಿಗೆ ಅದನ್ನು ನಿಲ್ಲಿಸುವಂತೆ ಸೂಚಿಸಿದರು. ನಾವೆಲ್ಲರೂ ಇದನ್ನು ಟಿವಿಯಲ್ಲಿ ನೋಡುತ್ತಿದ್ದೆವು’ ಎಂದು ಶಾ ಹೇಳಿದರು. ‘ಸೋನಿಯಾ ಜೀ, 140 ಕೋಟಿ ಜನರು ನಿಮ್ಮನ್ನು ನೋಡುತ್ತಿದ್ದಾರೆ. ನೀವು ಮಾಡಿರುವ ಈ ಪಾಪವನ್ನು ದೇಶದ ಜನ ಎಂದಿಗೂ ಕ್ಷಮಿಸುವುದಿಲ್ಲ. ವಂದೇ ಮಾತರಂನಂತಹ ರಾಷ್ಟ್ರಗೀತೆಯನ್ನು ಅರ್ಧಕ್ಕೆ ನಿಲ್ಲಿಸುವ ಯೋಚನೆ ಯಾರಿಗಾದರೂ ಹೇಗೆ ಬರಲು ಸಾಧ್ಯ? ಕಾಂಗ್ರೆಸ್‌ನವರು ಇದಕ್ಕಾಗಿ ನಾಚಿಕೆಪಡಬೇಕು’ ಎಂದು ಶಾ ವಾಗ್ದಾಳಿ ನಡೆಸಿದರು.

‘ವೋಟ್‌ ಬ್ಯಾಂಕ್‌ ರಾಜಕಾರಣದಿಂದ ವಂದೇ ಮಾತರಂ ಮರೆತ ಕಾಂಗ್ರೆಸ್‌’ ವಿವಾದದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ರಾಜಕೀಯ ನಿಲುವಿನ ಮೇಲೂ ಅಮಿತ್‌ ಶಾ ವಾಗ್ದಾಳಿ ನಡೆಸಿದರು. ‘ವೋಟ್‌ ಬ್ಯಾಂಕ್‌ ರಾಜಕಾರಣದಿಂದ ಕಾಂಗ್ರೆಸ್‌ ವಂದೇ ಮಾತರಂ ಅನ್ನು ಮರೆತಿದೆ’ ಎಂದು ಆರೋಪಿಸಿದರು.ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಂದೇ ಮಾತರಂ ಹಾಡಿದ್ದಕ್ಕಾಗಿ ಸಾವಿರಾರು ಮಂದಿ ಗುಂಡೇಟು, ಲಾಠಿ ಏಟು ಹಾಗೂ ಜೈಲು ಶಿಕ್ಷೆ ಅನುಭವಿಸಿದ್ದರು ಎಂದು ಶಾ ನೆನಪಿಸಿದರು. ‘ಸ್ವಾತಂತ್ರ್ಯ ಬಂದು 80 ವರ್ಷಗಳ ಬಳಿಕವೂ ಕೆಂಪುಕೋಟೆ ಸೇರಿದಂತೆ ಧ್ವಜಾರೋಹಣ ನಡೆದ ಎಲ್ಲೆಡೆ ವಂದೇ ಮಾತರಂ ಹಾಡಲಾಗಿದೆ’ ಎಂದು ಅವರು ಹೇಳಿದರು.


Udayavani 1 hour ago
Home Flash News