ಹಿಂದಿ ʼದೃಶ್ಯಂ -3 ಟ್ರೇಲರ್ ರಿಲೀಸ್: ವಿಜಯ್ ಕುಟುಂಬಕ್ಕೆ ಹೊಸ ಎದುರಾಳಿ.!
ಮುಂಬಯಿ: ಸೂಪರ್ ಹಿಟ್ ಕ್ರೈಮ್ ಥ್ರಿಲರ್ ʼದೃಶ್ಯಂ -3ʼ (Drishyam 3) ಟ್ರೇಲರ್ ರಿಲೀಸ್ ಆಗಿದೆ. ವಿಜಯ್ (Ajay Devgn) ಮತ್ತೆ ತನ್ನ ಕುಟುಂಬದ ರಕ್ಷಣೆಗೆ ಎಲ್ಲಾ ಸವಾಲುಗಳನ್ನು ಎದುರಿಸಿ ನಿಲ್ಲುವ ರೋಚಕತೆಯನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಹಿಂದಿ ವರ್ಷನ್‌ನ ʼದೃಶ್ಯಂ -3ʼಯ ಅಂತಿಮ ಭಾಗ ಇದಾಗಿದೆ. ಈ ಸಲ ಹೊಸ ಪಾತ್ರಗಳು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದೆ. ಇದು ಮಲಯಾಳಂ ಚಿತ್ರಕ್ಕಿಂತ ಕೊಂಚ ಡಿಫ್ರೆಂಟ್ ಆಗಿ ಮೂಡಿ ಬಂದಿದೆ. ಕ್ರೈಮ್ ಬ್ರಾಂಚ್ ಎಸ್‌ಪಿ ಪಾತ್ರದಲ್ಲಿ ಜೈದೀಪ್ ಅಹ್ಲಾವತ್ ಹಾಗೂ ವಕೀಲನಾಗಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದರೆ, ಹಳೆಯ ಎದುರಾಳಿ ಟಬು (ಮೀರಾ ದೇಶ್‌ಮುಖ್) ವಿಜಯ್ ಮತ್ತವನ ಕುಟುಂಬಕ್ಕೆ ಎದುರಾಳಿಯಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಕುಟುಂಬವನ್ನು ರಕ್ಷಿಸಲು ವಿಜಯ್ ಎಷ್ಟರಮಟ್ಟಿಗೆ ಹೋಗಬಹುದು? ಮತ್ತು ಈ ಬಾರಿ ತಮ್ಮ "ಅಪರಾಧ"ವನ್ನು ಮುಚ್ಚಿಡಲು ಅವರು ಎಷ್ಟು ಹೊಸ ತಂತ್ರಗಳನ್ನು ಬಳಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಆಗಸ್ಟ್ 24 ರಂದು ಅಜಯ್ ದೇವಗನ್ ಈ ಸರಣಿಯ ಅಂತಿಮ ಭಾಗವನ್ನು ಅಧಿಕೃತವಾಗಿ ಘೋಷಿಸಿ, ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ್ದರು. ನಟನ ಕಣ್ಣಿನ ಕ್ಲೋಸ್-ಅಪ್ ನೋಟವಿದ್ದ ಆ ಪೋಸ್ಟರ್‌ನಲ್ಲಿ "ನನ್ನ ಸತ್ಯ, ನನ್ನ ಹಕ್ಕು, ಕೇವಲ ನನ್ನ ಕುಟುಂಬ" ಎಂಬ ಸಾಲಿತ್ತು. ಇದು ವಿಜಯ್ ಸಾಲ್ಗಾಂವ್ಕರ್ ಅವರ ಮನಸ್ಥಿತಿಯನ್ನು ಅತ್ಯಂತ ನಿಖರವಾಗಿ ಬಿಂಬಿಸಿತ್ತು. ಡಿಸೆಂಬರ್ 2025 ರಲ್ಲಿ ಬಿಡುಗಡೆಯಾದ ಮೊದಲ ಟೀಸರ್ ಈಗಾಗಲೇ ಚಿತ್ರದ ಕಥಾಹಂದರದ ಸುಳಿವನ್ನು ನೀಡಿತ್ತು. ಅಜಯ್ ದೇವಗನ್ ಅವರ ಹಿನ್ನೆಲೆ ಧ್ವನಿಯಲ್ಲಿ, "ಪ್ರಪಂಚ ನನ್ನನ್ನು ಅಪರಾಧಿ, ಕೊಲೆಗಾರ, ವಂಚಕ, ಧೂರ್ತ, ನಾಯಕ, ನಿಷ್ಪಾಪಿ, ತಂದೆ ಮತ್ತು ಮಾಸ್ಟರ್ ಮೈಂಡ್ ಹೀಗೆ ಹಲವು ಹೆಸರುಗಳಿಂದ ಕರೆಯುತ್ತದೆ. ಆದರೆ ನನಗೆ ಅದ್ಯಾವುದೂ ಮುಖ್ಯವಲ್ಲ. ಕಳೆದ ಏಳು ವರ್ಷಗಳಲ್ಲಿ ನಡೆದದ್ದು, ನಾನು ಮಾಡಿದ್ದು, ನೋಡಿದ್ದು ಅಥವಾ ತೋರಿಸಿದ್ದರಿಂದ ನನಗೆ ಒಂದಂತೂ ಅರ್ಥವಾಗಿದೆ: ಈ ಪ್ರಪಂಚದಲ್ಲಿ ಪ್ರತಿಯೊಬ್ಬರ ಸತ್ಯ ಮತ್ತು ಹಕ್ಕುಗಳು ವಿಭಿನ್ನ. ನನ್ನ ಸತ್ಯ ಮತ್ತು ನನ್ನ ಹಕ್ಕು ಎಂದರೆ ಅದು ನನ್ನ ಕುಟುಂಬ ಮಾತ್ರ. ವಿಚಾರಗಳು ಮುಗಿಯುವವರೆಗೆ, ಇತರರು ಸೋಲುವವರೆಗೆ, ನಾನು ಇಲ್ಲೇ ಕಾವಲುಗಾರನಂತೆ, ಗೋಡೆಯಂತೆ ನಿಂತಿರುತ್ತೇನೆ" ಎಂದು ಹೇಳುವ ಮೂಲಕ ತಮ್ಮ ಪಾತ್ರದ ಆಲೋಚನೆಯನ್ನು ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದರು.