ಹೇರ್ ಕಟ್ ವೇಳೆ ಸಲೂನ್ ಎಡವಟ್ಟು: ಮಾಡೆಲ್‌ಗೆ 25 ಲಕ್ಷ ರೂ. ಪರಿಹಾರ ನೀಡಲು ಸುಪ್ರೀಂಕೋರ್ಟ್ ಆದೇಶ
ತಾನು ಕೇಳಿದ್ದಕ್ಕಿಂತ ಹೆಚ್ಚು ಕೂದಲು ಕತ್ತರಿಸಿದ ದೆಹಲಿಯ ಐಟಿಸಿ ಮೌರ್ಯ ಸಲೂನ್ ವಿರುದ್ಧ ಮಾಡೆಲ್ ಆಶ್ನಾ ರಾಯ್ ದೂರು ದಾಖಲಿಸಿದ್ದರು. 2018ರಲ್ಲಿ ನಡೆದ ಈ ಘಟನೆಯ ಬಳಿಕ ಅವರು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ (NCDRC) ಮೊರೆ ಹೋಗಿದ್ದು, ಹಲವು ವರ್ಷಗಳ ಕಾನೂನು ಹೋರಾಟದ ನಂತರ ಕೊನೆಗೂ ₹25 ಲಕ್ಷ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಐಐಎಂ ಕಲ್ಕತ್ತಾ ಪದವೀಧರೆಯಾದ ಆಶ್ನಾ ರಾಯ್ ಅವರು ಉದ್ಯೋಗ ಸಂದರ್ಶನಕ್ಕೂ ಮುನ್ನ ಸಲೂನ್‌ಗೆ ಹೋಗಿ ನಾಲ್ಕು ಇಂಚು ಕೂದಲು ಟ್ರಿಮ್ ಮಾಡುವಂತೆ ಕೇಳಿದ್ದರು. ಆದರೆ ಸಿಬ್ಬಂದಿ ನಿರೀಕ್ಷೆಗಿಂತ ಹೆಚ್ಚು ಕೂದಲು ಕತ್ತರಿಸಿದ್ದರಿಂದ ಅವರ ಆತ್ಮವಿಶ್ವಾಸ ಮತ್ತು ವೃತ್ತಿಪರ ಇಮೇಜ್‌ಗೆ ಧಕ್ಕೆಯಾಗಿದೆ ಎಂದು ದೂರಿದ್ದರು.
ಈ ಹಿನ್ನೆಲೆಯಲ್ಲಿ ಅವರು ₹3 ಕೋಟಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಮೊದಲು NCDRC ₹2 ಕೋಟಿ ಪರಿಹಾರ ನೀಡುವಂತೆ ಆದೇಶಿಸಿದರೂ, ಐಟಿಸಿ ಮೌರ್ಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಫೆಬ್ರವರಿ 2026ರಲ್ಲಿ ಸುಪ್ರೀಂ ಕೋರ್ಟ್ ನಷ್ಟಕ್ಕೆ ನಿಖರ ಸಾಕ್ಷ್ಯ ಅಗತ್ಯವೆಂದು ಹೇಳಿ, ಪರಿಹಾರದ ಮೊತ್ತವನ್ನು ₹25 ಲಕ್ಷಕ್ಕೆ ಇಳಿಸಿತು.