ಅಷ್ಟಕ್ಕೂ ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ತಂದೆಗೆ ಏನಾಗಿದೆ? ರಿಂಕು ದಿಢೀರ್ ತಂಡ ತೊರೆದಿದ್ದೇಕೆ?
ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಭಾಗವಾಗಿರುವ ರಿಂಕು ಸಿಂಗ್, ಇದೀಗ ದಿಢೀರ್ ಎನ್ನುವಂತೆ ಭಾರತ ತಂಡ ತೊರೆದು ಮನೆಗೆ ವಾಪಾಸ್ಸಾಗಿದ್ದಾರೆ. ಅವರ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್ ಇಲ್ಲಿದೆ ನೋಡಿ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರು ಹೀನಾಯ ಸೋಲು ಅನುಭವಿಸಿದೆ. ಹೀಗಾಗಿ ಸೆಮಿಫೈನಲ್ ಪ್ರವೇಶಿಸುವ ಕನಸು ಜೀವಂತವಾಗಿಟ್ಟುಕೊಳ್ಳಬೇಕಿದ್ದರೇ ಇನ್ನುಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಟೀಂ ಇಂಡಿಯಾ ಸಿಲುಕಿದೆ. ಟೀಂ ಇಂಡಿಯಾ ಸೂಪರ್-8 ಹಂತದಲ್ಲಿ ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.
ಈ ಎರಡು ಪಂದ್ಯಗಳನ್ನು ಜಯಿಸಿದರಷ್ಟೇ ಸೆಮೀಸ್ ಪ್ರವೇಶಿಸಲು ಸಾಧ್ಯ. ಇದರ ಜತೆಗೆ ಅದೃಷ್ಟ ಕೂಡಾ ಕೈ ಹಿಡಿಯಬೇಕಷ್ಟೆ. ಹೀಗಿರುವಾಗಲೇ ರಿಂಕು ಸಿಂಗ್ ಕೂಡಾ ದಿಢೀರ್ ಎನ್ನುವಂತೆ ತಂಡ ತೊರೆದಿದ್ದಾರೆ. ಹೌದು, ಮಾಧ್ಯಮಗಳ ವರದಿಗಳ ಪ್ರಕಾರ, ರಿಂಕು ಸಿಂಗ್ ಅವರ ತಂದೆ ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಸದ್ಯ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎನ್ನಲಾಗುತ್ತದೆ. ಇದೇ ಕಾರಣಕ್ಕಾಗಿ ರಿಂಕು ಭಾರತ ತಂಡವನ್ನು ತೊರೆದು ಆಸ್ಪತ್ರೆಗೆ ದೌಡಾಯಿಸಿದ್ದಾರೆ ಎನ್ನಲಾಗಿದೆ. ನಿನ್ನೆಯಷ್ಟೇ ಮೈದಾನದಲ್ಲಿ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಅರ್ಶದೀಪ್ ಸಿಂಗ್, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇನ್ನಿತರ ಆಟಗಾರರು ಭರ್ಜರಿ ನೆಟ್ ಪ್ರಾಕ್ಟೀಸ್ ನಡೆಸಿದ್ದರು.
ಆದರೆ ಈ ವೇಳೆ ರಿಂಕು ಸಿಂಗ್ ಕಾಣಿಸಿಕೊಂಡಿರಲಿಲ್ಲ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರಿಂಕು ಸಿಂಗ್ ಪರಿಣಾಮಕಾರಿ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಐದು ಇನ್ನಿಂಗ್ಸ್‌ಗಳಿಂದ ರಿಂಕು ಕೇವಲ 24 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ವರ್ಷ 10 ಟಿ20 ಪಂದ್ಯಗಳನ್ನಾಡಿರುವ ರಿಂಕು ಸಿಂಗ್, 28.75ರ ಸರಾಸರಿಯಲ್ಲಿ ಕೇವಲ 115 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಒಂದು ವೇಳೆ ರಿಂಕು ಸಿಂಗ್ ಅಲಭ್ಯರಾದರೇ, ಅವರ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವ ಸಾಧ್ಯತೆಯಿದೆ. ಭಾರತ ತಂಡವು ಸೂಪರ್-8 ಹಂತದ ಮುಂದಿನ ಪಂದ್ಯದಲ್ಲಿ ಜಿಂಬಾವ್ವೆ ತಂಡವನ್ನು ಎದುರಿಸಲಿದೆ.