T20 World Cup: ದಕ್ಷಿಣ ಆಫ್ರಿಕಾ ವೆಸ್ಟ್ ಇಂಡೀಸ್ ಗೆದ್ದವರಿಗೆ ಸಿಗಲಿದೆ ಸೆಮಿ ಟಿಕೆಟ್
ಅಹ್ಮದಾಬಾದ್: ಬ್ಯಾಟಿಂಗ್ ಫೈರ್ ಪವರ್ ಹೊಂದಿರುವ ವೆಸ್ಟ್ ಇಂಡೀಸ್ ಮತ್ತು ಪ್ರಬಲ ವೇಗದ ಅಸ್ತ್ರವನ್ನು ಹೊಂದಿರುವ ದಕ್ಷಿಣ ಆಫ್ರಿಕಾ ತಂಡಗಳು ಗುರುವಾರದ ಮೊದಲ ‘ಗ್ರೂಪ್ 1 ಸೂಪರ್ 8’ ಪಂದ್ಯದಲ್ಲಿ ಎದುರಾಗಲಿವೆ. ಎರಡೂ ತಂಡಗಳು ಮೊದಲ ಸೂಪರ್ 8 ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿದ್ದು, ಇಲ್ಲಿ ಗೆದ್ದವರು ಸೆಮಿಫೈನಲ್ ಪ್ರವೇಶಿಸುವುದು ಖಚಿತವಾಗಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಎಡವಿದ ಭಾರತಕ್ಕೂ ಈ ಪಂದ್ಯದ ಫಲಿತಾಂಶ ಮಹತ್ವದ್ದಾಗಿದೆ. ಇಲ್ಲಿ ದಕ್ಷಿಣ ಆಫ್ರಿಕಾ ಜಯಿಸಿದರೆ ಸೂರ್ಯಕುಮಾರ್ ಬಳಗಕ್ಕೆ ಲಾಭ ಜಾಸ್ತಿ.
ವೆಸ್ಟ್ ಇಂಡೀಸ್ ಪವರ್ ಹಿಟ್ಟರ್ ಗಳನ್ನು ಹೊಂದಿರುವ ಬಲಾಢ್ಯ ತಂಡ. ಶಿಮ್ರನ್ ಹೆಟ್ ಮೈರ್, ರೊಮಾರಿಯೋ ಶೆಫರ್ಡ್, ಶರ್ಫೇನ್ ರುದರ್ ಫೋರ್ಡ್ ಪ್ರಚಂಡ ಫಾರ್ಮ್ ಹೊಂದಿದ್ದಾರೆ. ನಾಯಕ ಶೈ ಹೋಪ್, ಬ್ರ್ಯಾಂಡನ್ ಕಿಂಗ್ ಕೂಡ ಅಪಾಯಕಾರಿ ಬ್ಯಾಟರ್ಸ್.
ವಿಂಡೀಸ್ ಬೌಲಿಂಗ್ ಸರದಿಯಲ್ಲಿ ಎಡಗೈ ಸ್ಪಿನ್ನರ್ ಗುಡಕೇಶ್ ಮೋಟಿ, ಅಖೀಲ್ ಹುಸೇನ್, ಮ್ಯಾಥ್ಯೂ ಫೋರ್ಡ್ ಅವರನ್ನು ಹೆಚ್ಚು ಅವಲಂಬಿಸಿದೆ. ಆದರೆ ದಕ್ಷಿಣ ಆಫ್ರಿಕಾದ ಬೌಲಿಂಗ್ ಯೂನಿಟ್ ಗೆ ಇದು ಸಾಟಿಯಲ್ಲ. ಇವರ ಓಟದಲ್ಲಿ ಜಾನ್ಸೆನ್, ರಬಾಡ, ಎನ್ಗಿಡಿ, ಮಹಾರಾಜ್, ಬಾಶ್ ಅವರ ಕೊಡುಗೆ ಗಮನಾರ್ಹ.
ಭಾರತದ ವಿರುದ್ಧ 20 ರನ್ನಿಗೆ 3 ವಿಕೆಟ್ ಕಳೆದುಕೊಂಡೂ 7ಕ್ಕೆ 187 ರನ್ ಪೇರಿಸಿದ್ದು ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ತಿರುಗೇಟಿಗೆ ಸಾಕ್ಷಿ. ಮಾರ್ಕರಮ್, ಡಿ ಕಾಕ್, ರಿಕಲ್ಟನ್, ಬ್ರೇವಿಸ್, ಮಿಲ್ಲರ್ , ಸ್ಟಬ್ಸ್ ಕ್ರೀಸ್ ಆಕ್ರಮಿಸಿಕೊಂಡರೆ ದೊಡ್ಡ ಮೊತ್ತಕ್ಕೇನೂ ಕೊರತೆ ಇಲ್ಲ.
ಅಹ್ಮದಾಬಾದ್ ನಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಿರುವುದು ಕೂಡ ಮಾರ್ಕರಮ್ ಪಡೆಗೆ ಲಾಭವಾದೀತೆಂಬ ನಿರೀಕ್ಷೆ ಇದೆ. ಅವರು ಭಾರತವನ್ನು ಮಣಿಸಿದ್ದು ಕೂಡ ಇದೇ ಅಂಗಳದಲ್ಲಿ!