ಹರಾಜಿನಲ್ಲಿ 14 ಪಾಕಿಸ್ತಾನಿಯರು: ಐಪಿಎಲ್ ಫ್ರಾಂಚೈಸಿ ಮೇಲೆ ಎಲ್ಲರ ಕಣ್ಣು!
The Hundred 2026: ದಿ ಹಂಡ್ರೆಡ್ ಲೀಗ್ ಶುರುವಾಗಿದ್ದು 2021 ರಲ್ಲಿ. ಈ ಟೂರ್ನಿಯಲ್ಲಿ 100 ಎಸೆತಗಳ ಪಂದ್ಯ ನಡೆಯಲಿದೆ. ಅಂದರೆ ಟಿ20 ಬದಲಿಗೆ ಇಲ್ಲಿ ಪ್ರತಿ ಇನಿಂಗ್ಸ್ಗೆ 100 ಎಸೆತಗಳನ್ನು ಎಸೆಯಲಾಗುತ್ತದೆ. ಹಾಗೆಯೇ ಒಂದು ಓವರ್ನಲ್ಲಿ 5 ಎಸೆತಗಳು ಇರಲಿವೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂದರೆ ಒಬ್ಬ ಬೌಲರ್ ಸತತ 2 ಓವರ್ ಅಥವಾ 10 ಎಸೆತಗಳನ್ನು ಎಸೆಯಬಹುದು. ಹೀಗೆ ಹಲವು ರೀತಿಯಲ್ಲಿ ವಿಭಿನ್ನವಾಗಿ ಟೂರ್ನಿಗೆ ಇದೀಗ ಐಪಿಎಲ್ ಫ್ರಾಂಚೈಸಿಗಳು ಎಂಟ್ರಿ ಕೊಟ್ಟಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ನ 6ನೇ ಸೀಸನ್ನ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ಮಾರ್ಚ್ 11 ಮತ್ತು 12 ರಂದು ನಡೆಯಲಿರುವ ಈ ಹರಾಜಿಗಾಗಿ ಒಟ್ಟು 14 ಪಾಕಿಸ್ತಾನ್ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಆರಂಭದಲ್ಲಿ 63 ಪಾಕ್ ಆಟಗಾರರು ಹೆಸರು ನೋಂದಣಿ ಮಾಡಿಕೊಂಡಿದ್ದರು. ಆದರೆ ಶಾರ್ಟ್ ಲಿಸ್ಟ್ ಮಾಡಲಾದ ಪಟ್ಟಿಯಲ್ಲಿ ಕೇವಲ 14 ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ. ಇತ್ತ ಹರಾಜಿನಲ್ಲಿ ಪಾಕ್ ಆಟಗಾರರು ಕಾಣಿಸಿಕೊಂಡ ಬೆನ್ನಲ್ಲೇ ಎಲ್ಲರ ಕಣ್ಣು ಐಪಿಎಲ್ ಫ್ರಾಂಚೈಸಿಗಳ ಮೇಲೆ ನೆಟ್ಟಿದೆ. ಏಕೆಂದರೆ ಇಂಡಿಯನ್ ಪ್ರೀಮಿಯರ್ ಲೀಗ್ನ 4 ಫ್ರಾಂಚೈಸಿಗಳು ಈ ಬಾರಿಯ ಟೂರ್ನಿಯ ಮೂಲಕ ದಿ ಹಂಡ್ರೆಡ್ ಲೀಗ್ಗೆ ಕಾಲಿಡುತ್ತಿದೆ. ಹೀಗಾಗಿಯೇ ಐಪಿಎಲ್ ಫ್ರಾಂಚೈಸಿಗಳು ಪಾಕ್ ಆಟಗಾರರಿಗಾಗಿ ಬಿಡ್ಡಿಂಗ್ ಮಾಡಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಮಡಿದೆ.
ದಿ ಹಂಡ್ರೆಡ್ ಲೀಗ್ನಲ್ಲಿರುವ ಐಪಿಎಲ್ ಫ್ರಾಂಚೈಸಿಗಳು:
ಎಂಐ ಲಂಡನ್ (ಮುಂಬೈ ಇಂಡಿಯನ್ಸ್)
ಸನ್ರೈಸರ್ಸ್ ಲೀಡ್ಸ್ (ಸನ್ರೈಸರ್ಸ್ ಹೈದರಾಬಾದ್)
ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ (ಲಕ್ನೋ ಸೂಪರ್ ಜೈಂಟ್ಸ್)
ಸದರ್ನ್ ಬ್ರೇವ್ (ಡೆಲ್ಲಿ ಕ್ಯಾಪಿಟಲ್ಸ್)
ಈ ನಾಲ್ಕು ಫ್ರಾಂಚೈಸಿಗಳು ಪಾಕಿಸ್ತಾನ್ ಆಟಗಾರರಿಗಾಗಿ ಬಿಡ್ಡಿಂಗ್ ನಡೆಸಲಿದೆಯಾ ಎಂಬುದೇ ಈಗ ಕುತೂಹಲ. ಏಕೆಂದರೆ ಈ ಹಿಂದೆ ಐಪಿಎಲ್ ಫ್ರಾಂಚೈಸಿಗಳು ಪಾಕ್ ಆಟಗಾರರಿಗೆ ಬಿಡ್ ನಡೆಸಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು. ಇದಾಗ್ಯೂ ಆಟಗಾರರ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡಬಾರದೆಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಎಲ್ಲಾ ಫ್ರಾಂಚೈಸಿಗಳಿಗೆ ಸೂಚನೆ ನೀಡಿದೆ. ಹೀಗಾಗಿ 4 ಫ್ರಾಂಚೈಸಿಗಳ ಮುಂದಿನ ನಡೆಯೇನು ಎಂಬುದು ಮಾರ್ಚ್ 11 ಮತ್ತು 12 ರಂದು ಬಹಿರಂಗವಾಗಲಿದೆ.