65 ವಾರ್ಡ್‌ಗಳಲ್ಲಿ ಅಂತರ್ಜಲ ಕುಸಿತ: ಕೆರೆಗೆ ನೀರು ತುಂಬಿಸಲು ಮುಂದಾದ ಜಲಮಂಡಳಿ
ಬೆಂಗಳೂರು: ಬೇಸಿಗೆ ಆರಂಭದಲ್ಲಿಯೇ ನಗರದ 65 ವಾರ್ಡ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದನ್ನು ವಿಜ್ಞಾನಿಗಳು ಹಾಗೂ ತಜ್ಞರ ತಂಡ ಪತ್ತೆ ಮಾಡಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಸಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿಗಳು ದತ್ತಾಂಶಗಳನ್ನು ಸಂಗ್ರಹಿಸಿದಾಗ ವಿಜಯನಗರ, ಶಿವಾಜಿನಗರ, ಚಾಮರಾಜಪೇಟೆ, ಕೆಂಗೇರಿ, ಕೋರಮಂಗಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಂತರ್ಜಲ ಕುಸಿತ ಕಂಡಿರುವುದು ಕಂಡು ಬಂದಿದೆ.
ಕೇಂದ್ರ ಅಂತರ್ಜಲ ಸಂಸ್ಥೆ ಅಧಿಕಾರಿಗಳು, ಕರ್ನಾಟಕ ಅಂತರ್ಜಲ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರ ತಂಡವು ಮಾಹಿತಿ ಕಲೆ ಹಾಕಿದೆ.
ಈ ಮಾಹಿತಿ ಆಧರಿಸಿ ಸಮಸ್ಯೆ ಇರುವ ಕಡೆಗಳಲ್ಲಿ ನೀರಿನ ಸಂಪರ್ಕ ಹೆಚ್ಚಿಸುವುದು ಸೇರಿದಂತೆ ತುರ್ತು ಕಾರ್ಯಕ್ರಮಗಳನ್ನು ರೂಪಿಸಲು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ತೀರ್ಮಾನಿಸಿದೆ. ನಗರದಲ್ಲಿ 15 ಲಕ್ಷ ನೀರಿನ ಸಂಪರ್ಕಗಳನ್ನು ಕಲ್ಪಿಸಲಾಗಿದೆ. ಕಾವೇರಿ 5ನೇ ಹಂತದ ಯೋಜನೆ ಜಾರಿಯಾದ ನಂತರ ಅಕ್ರಮ ನೀರು ಬಳಕೆದಾರರನ್ನು ಪತ್ತೆ ಹಚ್ಚಿ ಸಂಪರ್ಕ ನೀಡಲು ಜಲಮಂಡಳಿ ಅಭಿಯಾನ ನಡೆಸಿದ್ದು, ಬೇಸಿಗೆಯಲ್ಲಿ ಇದನ್ನು ಇನ್ನಷ್ಟು ತೀವ್ರಗೊಳಿಸಲಿದೆ. ಅಂತರ್ಜಲ ಸಮಸ್ಯೆ ಕಂಡು ಬಂದಿರುವ 65 ವಾರ್ಡ್‌ಗಳಲ್ಲಿ ಆದ್ಯತೆ ಮೇರೆಗೆ ನೀರಿನ ಸಂಪರ್ಕ ನೀಡಲಾಗುತ್ತದೆ. ಅಪಾರ್ಟ್‌ಮೆಂಟ್‌ಗಳಿಗೆ ತ್ವರಿತವಾಗಿ ನೀರಿನ ಸಂಪರ್ಕ ನೀಡುವಂತೆಯೂ ಸೂಚಿಸಲಾಗಿದೆ.
ಈ ವಾರ್ಡ್‌ಗಳಲ್ಲಿ ನೀರಿನ ಸಂಪರ್ಕಕ್ಕೆ ಬೇಕಾದ ಕೊಳವೆ ಮಾರ್ಗ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳುವಂತೆಯೂ ಅಧಿಕಾರಿಗಳಿಗೆ ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್ ಮನೋಹರ್ ಆದೇಶಿಸಿದ್ದಾರೆ.
‘ನಗರದ ಎಲ್ಲಾ ಪ್ರದೇಶಗಳಿಗೂ ಸಮರ್ಪಕ ರೀತಿಯಲ್ಲಿ ನೀರು ವಿತರಣೆಯಾಗಬೇಕು. ನೀರಿನ ಉಳಿತಾಯಕ್ಕಾಗಿ ಏರಿಯೇಟರ್‌ಗಳ ಅಳವಡಿಕೆಗೆ ಹೆಚ್ಚಿನ ಗಮನ ಹರಿಸಬೇಕು. ಕುಡಿಯುವ ನೀರನ್ನು ವಾಹನ ಶುದ್ಧೀಕರಣ, ತೋಟಗಾರಿಕೆ ಹಾಗೂ ಮನೆ ಅಂಗಳ ತೊಳೆಯಲು ಬಳಸಿದರೆ ದಂಡ ವಿಧಿಸಬೇಕು. ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನೇ ಬಳಸುವಂತೆ ನಿಗಾವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
‘ಹಿಂದಿನ ವರ್ಷಗಳಲ್ಲಿ ಸಮಸ್ಯೆ ಎದುರಾದಾಗ 12 ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲಾಗಿತ್ತು. ಈ ಬಾರಿ ಇನ್ನೂ ಎರಡು ಕೆರೆಗಳನ್ನು ಸೇರಿಸಿಕೊಂಡು ನೀರು ತುಂಬುವ ಕ್ರಿಯಾಯೋಜನೆ ರೂಪಿಸಲಾಗಿದೆ’ ಎಂದು ಜಲಮಂಡಳಿ ಅಧಿಕಾರಿ ತಿಳಿಸಿದರು.