Lunar eclipse: ಶ್ರೀಕೃಷ್ಣ ಮಠದಲ್ಲಿ ಭೋಜನವಿಲ್ಲ, ದರ್ಶನವಿದೆ
ಮಂಗಳವಾರ (ಮಾ.3) ಚಂದ್ರಗ್ರಹಣ ಸಂಭವಿಸಲಿದೆ. ಅಂದು ಸೂರ್ಯಾಸ್ತಮಾನವಾಗಿ ಚಂದ್ರೋದಯವಾಗುವಾಗಲೇ ಗ್ರಹಣ ಹಿಡಿದಿರುತ್ತದೆ. ಸಂಜೆ 6.39ರಿಂದ 6.47ರ ವರೆಗೆ ಎಂಟು ನಿಮಿಷ ಗ್ರಹಣ ಭಾರತದಲ್ಲಿ ಗೋಚರಿಸುತ್ತದೆ.
ಅಂದು ಶ್ರೀಕೃಷ್ಣ ಮಠದಲ್ಲಿ ಏಕಾದಶಿ ರೀತಿ ಉಪವಾಸ ಆಚರಿಸಲಾಗುವುದು. ಬೆಳಗ್ಗೆಯ ಪೂಜೆ ಯಥಾವತ್ತಾಗಿ ನಡೆಯುತ್ತದೆ. ರಾತ್ರಿ ಪೂಜೆ 7 ಗಂಟೆ ಅನಂತರ ನಡೆಯುತ್ತದೆ. ಗ್ರಹಣದ ಸಮಯದಲ್ಲಿ ಮಧ್ವ ಸರೋವರದಲ್ಲಿ ಸ್ನಾನ ಮಾಡಿ ತಟಾಕದಲ್ಲಿ ಜಪ ಪಾರಾಯಣಗಳನ್ನು ನಡೆಸಲಾಗುತ್ತದೆ.
ಹೋಳಿ ಹುಣ್ಣಿಮೆ ಪ್ರಯುಕ್ತ ಸಂಜೆ ಕಡಿಯಾಳಿಗೆ ಹೋಗಿ ಅಲ್ಲಿ ಬನ್ನಿ ಪೂಜೆ ನಡೆಯುತ್ತದೆ. ಹೋಳಿ ನಿಮಿತ್ತದ ಪೂಜೆ ಮರುದಿನ ಶ್ರೀಕೃಷ್ಣ ಮಠದಲ್ಲಿ ನಡೆಯಲಿದೆ ಎಂದು ಶ್ರೀಕೃಷ್ಣ ಮಠದ ದಿವಾನ್ ಡಾ| ಉದಯಕುಮಾರ್‌ಸರಳತ್ತಾಯ ತಿಳಿಸಿದ್ದಾರೆ. ಶಾಸ್ತ್ರ ಪ್ರಕಾರ ಮಾ. 3ರಂದು ಹಗಲು ಭೋಜನ ನಿಷಿದ್ಧ. ಆದರೆ ಮಕ್ಕಳು, ವೃದ್ಧರು, ರೋಗಿಗಳು ಮಧ್ಯಾಹ್ನದವರೆಗೆ ಆಹಾರ ಸ್ವೀಕರಿಸಬಹುದು. ರಾತ್ರಿ 7ರ ಬಳಿಕ ಸ್ನಾನ ಮಾಡಿ ಆಹಾರ ತಯಾರಿಸಿ ಸ್ವೀಕರಿಸಬಹುದು.