ಬಿಹಾರದಲ್ಲಿ ಕೊನೆಗೂ ಮೊದಲ 'ಬಿಜೆಪಿ ಸಿಎಂ';ಯಾರಾಗುತ್ತಾರೆ ಸಾಮ್ರಾಟ?
ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ರಾಜ್ಯಸಭಾ ಸದಸ್ಯರಾಗುವ ಬಯಕೆ ಬಿಹಾರದಲ್ಲಿ ಹೊಸ ಸರಕಾರ ರಚನೆಗೆ ದಾರಿ ಮಾಡಿಕೊಟ್ಟಿದ್ದು, ಹಿಂದಿ ಹೃದಯಭೂಮಿ ರಾಜ್ಯದಲ್ಲಿ ಸಿಎಂ ಹುದ್ದೆ ಕೈತಪ್ಪಿದ ಏಕೈಕ ರಾಜ್ಯ ಈಗ ಭಾರತೀಯ ಜನತಾ ಪಕ್ಷದ ಕೈಗೆ ಸಿಕ್ಕಿದಂತಾಗಿದೆ.
ನಾಲ್ಕು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 89 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮಾತಿಗೆ ತಪ್ಪದೆ ನಿತೀಶ್ ಕುಮಾರ್ ಅವರಿಗೆ ಪಟ್ಟ ಕಟ್ಟಿತ್ತು. 2020 ರ ನಂತರ ಎರಡನೇ ಬಾರಿಗೆ ಜೆಡಿ ಯು ಗಿಂತ ಹೆಚ್ಚಿನ ಸಾಧನೆ ಮಾಡಿದರೂ ಸಿಎಂ ಹುದ್ದೆಗೆ ಲಾಭಿ ಮಾಡಿರಲಿಲ್ಲ. ಈಗ ರಾಜಕೀಯ ಸನ್ನಿವೇಶ ಬದಲಾಗಿ ಬಿಜೆಪಿ ತನ್ನ ಮುಖ್ಯಮಂತ್ರಿಯನ್ನು ನೇಮಕ ಮಾಡಲಿದೆ.
ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಿರುವ ವೇಳೆ ಈ ಬೆಳವಣಿಗೆ ನಡೆದಿದ್ದು, ನೂತನ ಸರಕಾರದ ಪ್ರಮಾಣವಚನ ಸಮಾರಂಭ ಬಿಜೆಪಿಯ ಬಲ ಪ್ರದರ್ಶನಕ್ಕೆ ಸಾಕ್ಷಿಯಾಗಲಿದೆ.
ಸಾಮಾಜಿಕ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಕೂಡ ದುರ್ಬಲ ವರ್ಗಗಳಿಂದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬಬಹುದು ಎಂಬ ಊಹಾಪೋಹಗಳು ಹರಡಿವೆ. ಮುಖ್ಯಮಂತ್ರಿ ಹುದ್ದೆಗೆ ಕೇಳಿಬರುತ್ತಿರುವ ಪ್ರಮುಖ ಹೆಸರುಗಳಲ್ಲಿ ಸಾಮ್ರಾಟ್ ಚೌಧರಿ ಕೂಡ ಅವರ ಹೆಸರು ಮುಂಚೂಣಿಯಲ್ಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಬಿಜೆಪಿಯ ನಿಜವಾದ ಪ್ರಧಾನ ತಂತ್ರಜ್ಞ, ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಸಾಮ್ರಾಟ್ ಸಮ್ಮುಖದಲ್ಲೇ ದೊಡ್ಡ ವ್ಯಕ್ತಿಯನ್ನಾಗಿ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು.ಪ್ರಸ್ತುತ ಗೃಹ ಖಾತೆಯೊಂದಿಗೆ ಉಪಮುಖ್ಯಮಂತ್ರಿಯಾಗಿರುವ ಚೌಧರಿ, ಕೊಯೇರಿ ಎಂಬ ಒಬಿಸಿ ಜಾತಿಗೆ ಸೇರಿದವರಾಗಿದ್ದಾರೆ.