Dehradun: ಇಂದಿನಿಂದ ಚಾರಧಾಮ್ ಯಾತ್ರೆಗೆ ಆನ್‌ಲೈನ್ ನೋಂದಣಿ ಆರಂಭ
ಲಕ್ಷಾಂತರ ಭಕ್ತರ ಆರಾಧ್ಯ ದೈವಗಳಾದ ಉತ್ತರಾಖಂಡದ ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳ ದರ್ಶನಕ್ಕಾಗಿ ಕೈಗೊಳ್ಳುವ ಪವಿತ್ರ 'ಚಾರಧಾಮ್ ಯಾತ್ರೆ'ಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಇಂದು (ಮಾ. 6) ಶುಕ್ರವಾರದಿಂದ ಅಧಿಕೃತವಾಗಿ ಚಾಲನೆ ಪಡೆಯಲಿದೆ.
ಮುಂದಿನ ತಿಂಗಳು ಅಕ್ಷಯ ತೃತೀಯದ ಶುಭ ದಿನದಂದು ಯಾತ್ರೆ ಆರಂಭವಾಗಲಿದ್ದು, ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಉತ್ತರಾಖಂಡ ಸರ್ಕಾರವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಯಾವಾಗ, ಹೇಗೆ ನೋಂದಣಿ?
ಮಾರ್ಚ್ 6ರ ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದಲೇ ಆನ್‌ಲೈನ್ ನೋಂದಣಿ ಲಭ್ಯವಿರಲಿದೆ. ಭಕ್ತರು ಅಧಿಕೃತ ಮೊಬೈಲ್ ಆ್ಯಪ್ ಮೂಲಕ ಅಥವಾ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್ ಮೂಲಕ ಸುಲಭವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು.
ಯಾತ್ರಾರ್ಥಿಗಳ ಸುರಕ್ಷತೆ ಮತ್ತು ದಟ್ಟಣೆ ನಿಯಂತ್ರಣದ ದೃಷ್ಟಿಯಿಂದ ಈ ಬಾರಿ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ಆಫ್‌ಲೈನ್ ನೋಂದಣಿಯೂ ಲಭ್ಯ
ಡಿಜಿಟಲ್ ನೋಂದಣಿ ಮಾಡಲು ಸಾಧ್ಯವಾಗದವರಿಗಾಗಿ ಆಫ್‌ಲೈನ್ ಕೌಂಟರ್‌ಗಳನ್ನು ಸಹ ತೆರೆಯಲಾಗುತ್ತಿದೆ. ಏಪ್ರಿಲ್ 17ರಿಂದ ಅಂದರೆ ಯಾತ್ರೆ ಆರಂಭವಾಗುವ ಎರಡು ದಿನ ಮೊದಲು ರಿಷಿಕೇಶ, ಹರಿದ್ವಾರ ಮತ್ತು ಡೆಹ್ರಾಡೂನ್‌ನಲ್ಲಿ ನೋಂದಣಿ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ.
ಯಾತ್ರಾರ್ಥಿಗಳ ಸುಗಮ ಸಂಚಾರಕ್ಕಾಗಿ ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಭಕ್ತರು ಮೊದಲೇ ನೋಂದಣಿ ಮಾಡಿಕೊಂಡು ಸಹಕರಿಸಬೇಕು," ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಪ್ರಕಟಣೆ ತಿಳಿಸಿದೆ.